ಬೀದರ್, ಮೇ 08 (DaijiworldNews/DB): ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆಗೆ ನೀಡಿರುವ ನೊಟೀಸ್ ವಿಚಾರದ ಕುರಿತು ನಾನೇನು ಹೇಳುವುದಿಲ್ಲ. ಅದಕ್ಕೆ ಅವರೇ ಉತ್ತರ ನೀಡುತ್ತಾರೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬೀದರನ ಭಾಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ನೊಟೀಸ್ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಪ್ರಿಯಾಂಕ್ ಖರ್ಗೆಗೆ ನೊಟೀಸ್ ನೀಡಿದ್ದಕ್ಕೆ ಅವರೇ ಉತ್ತರ ನೀಡುತ್ತಾರೆ. ನಾನು ಮಾತನಾಡಿ ತನಿಖೆ ಮೇಲೆ ಅನಗತ್ಯ ಪರಿಣಾಮ ಬೀರುವಂತಹ ಕೆಲಸ ಮಾಡುವುದಿಲ್ಲ ಎಂದರು.
ಮಂದಿರಗಳಲ್ಲಿ ಶ್ರೀರಾಮ ಸೇನೆಯಿಂದ ಹನುಮಾನ ಚಾಲಿಸಾ ಅಭಿಯಾನ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದೆ ಚುನಾವಣೆ ಇರುವುದರಿಂದ ಬಿಜೆಪಿ ಮತ್ತು ರಾಮಭಕ್ತರಿಂದ ಇಂತಹದ್ದೆಲ್ಲ ನಡೆಯುತ್ತಿದೆ. ಇಷ್ಟು ದಿನ ಇವರೆಲ್ಲ ಎಲ್ಲಿ ಹೋಗಿದ್ದರೋ ಗೊತ್ತಿಲ್ಲ. ಮುಸ್ಲಿಂ ಅಥವಾ ಇತರ ಯಾವುದೇ ಶೋಷಿತ ಸಮುದಾಯದ ವಿರುದ್ದ ಅನ್ಯಾಯ, ದಬ್ಬಾಳಿಕೆ ನಡೆಸುವುದು ತಪ್ಪು. ಅಂತಹವುಗಳು ಘಟಿಸಿದಾಗ ಕಾಂಗ್ರೆಸ್ ಸದಾ ಧ್ವನಿ ಎತ್ತುತ್ತದೆ ಎಂದು ತಿಳಿಸಿದರು.