ಧರ್ಮಶಾಲಾ, ಮೇ 08 (DaijiworldNews/DB): ಹಿಮಾಚಲ ಪ್ರದೇಶದ ವಿಧಾನಸಭೆಯ ಪ್ರವೇಶ ದ್ವಾರ ಮತ್ತು ಗೋಡೆಯ ಮೇಲೆ ಕಿಡಿಗೇಡಿಗಳು ಖಲಿಸ್ತಾನ್ ಧ್ವಜಗಳನ್ನು ಅಂಟಿಸಿರುವುದು ಕಂಡು ಬಂದಿದೆ.
ಶನಿವಾರ ತಡರಾತ್ರಿ ಅಥವಾ ಭಾನುವಾರ ಮುಂಜಾನೆ ಈ ಧ್ವಜಗಳನ್ನು ಅಂಟಿಸಿರುವ ಸಾಧ್ಯತೆ ಇದೆ. ಇದನ್ನು ನೋಡಿದ ತತ್ಕ್ಷಣ ಧ್ವಜಗಳನ್ನು ಕಿತ್ತು ಹಾಕಲಾಗಿದೆ. ಪಂಜಾಬ್ ಕಡೆಯಿಂದ ಬಂದ ಪ್ರವಾಸಿಗರ ಪೈಕಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಶರ್ಮ ಹೇಳಿದ್ದಾರೆ.
ಇನ್ನು ಕಿಡಿಗೇಡಿಗಳ ಕೃತ್ಯವನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಖಂಡಿಸಿದ್ದಾರೆ. ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನ ಮಾತ್ರ ನಡೆಯುತ್ತದೆ. ಆ ಸಮಯದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ಅಗತ್ಯವಿದೆ. ಪ್ರಸ್ತುತ ಖಲಿಸ್ತಾನ್ ಧ್ವಜ ಅಳವಡಿಕೆ ಮಾಡಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದ್ದಾರೆ.