ಬೆಂಗಳೂರು, ಮೇ 08 (DaijiworldNews/DB): ದಕ್ಷತೆಗೆ ಹೆಸರಾಗಿದ್ದ ಪೊಲೀಸ್ ವ್ಯವಸ್ಥೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಉಸ್ತುವಾರಿಯಲ್ಲಿ ಅನಗ್ಯವಾದ ಕಳಂಕ ಹೊತ್ತುಕೊಳ್ಳುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ಆಡಿಯೋ ಕ್ಲಿಪ್ ನ ನೈಜ್ಯತೆಯನ್ನು ದೃಢಪಡಿಸಿಕೊಳ್ಳಲಾಗದಷ್ಟು ಮಟ್ಟಿಗೆ ಸಿಐಡಿ ದುರ್ಬಲವಾಗಿದೆ ಎಂದು ಅನಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನನಗೆ ಮೂರು ಬಾರಿ ನೋಟಿಸ್ ನೀಡಿರುವ ಸಿಐಡಿ, ನನಗಿಂತ ಮುಂಚೆ ಪಿಎಸ್ಥ ಪರೀಕ್ಷೆಯಲ್ಲಿ ಹಗರಣ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಸಚಿವ ಪ್ರಭು ಚವ್ಹಾಣ್, ಪರಿಷತ್ ಸದಸ್ಯ ಸಂಕನೂರು, ಪರಿಷತ್ ಸದಸ್ಯ ಶಶಿಲ್ ನಮೋಷಿಯವರಿಗೆ ಇನ್ನೂ ಯಾಕೆ ನೋಟಿಸ್ ನೀಡಿಲ್ಲ? ಇದು ಯಾವ ಸೀಮೆ ತನಿಖೆ? ಎಂದು ಪ್ರಶ್ನಿಸಿದ್ದಾರೆ. ಸಿಐಡಿ ನೀರಿರುವ ನೊಟೀಸ್ಗೆ ಲಿಖಿತ ಉತ್ತರ ನೀಡಿದ್ದೇನೆ. ನಾನು ಅಥವಾ ನನ್ನ ಕಡೆಯವರು ಭಾಗಿಯಾಗಿದ್ದರೆ ಮುಲಾಜಿಲ್ಲದೆ ಅವರು ಕ್ರಮ ಕೈಗೊಳ್ಳಲಿ ಎಂಬುದಾಗಿ ಮೊದಲ ದಿನವೇ ಹೇಳಿದ್ದೇನೆ. ದುರ್ಬಲ ಗೃಹ ಸಚಿವ ಕಳಂಕದಿಂದ ತಪ್ಪಿಸಿಕೊಳ್ಳಬೇಕಾದರೆ ದಿಟ್ಟ ಕ್ರಮ ಕೈಗೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ಸಲಹೆ ಮಾಡಿದರು.
ಹಗರಣದಲ್ಲಿ ವಸೂಲಿ ಮಾಡಿರುವ ಹಣವನ್ನು ಮರೆ ಮಾಚುವ ಉದ್ದೇಶದಿಂದ ತನಿಖೆ ನಿಧಾನಗತಿಯಲ್ಲಿ ಸಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸಣ್ಣ ಆರೋಪಿಗಳನ್ನು ಹಿಡಿದು ಬೀಗಬೇಡಿ. ಹುದ್ದೆಗಾಗಿ ಸಂಗ್ರಹಿಸಿದ ಹಣ ಯಾರಿಗೆಲ್ಲ ಹಂಚಿಕೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಿ ಎಂದವರು ಇದೇ ವೇಳೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸತ್ಯ ಯಾವಾಗಲೂ ಕಹಿಯೇ. ಅದನ್ನು ಅರಗಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಪಕ್ಷಗಳೆಡೆಗೆ ಬೆರಳು ತೋರಿಸಿ ತಾವು ಒಳ್ಳೆಯವರು ಎಂದು ಬಿಂಬಿಸಿಕೊಳ್ಳಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಬಂಧಿತ ಆರೋಪಿಗಳು ನೀಡಿರುವ ಎಲ್ಲಾ ಹೇಳಿಕೆಗಳನ್ನು ಬಹಿರಂಗಗೊಳಿಸಿ ಎಂದು ಗೃಹ ಸಚಿವರಿಗೆ ಖರ್ಗೆ ಸವಾಲೆಸೆದರು.