ಬೆಂಗಳೂರು, ಮೇ 08 (DaijiworldNews/HR): ಕರ್ನಾಟಕದಲ್ಲಿ ಹೆಚ್ಚುವರಿ 1,000 ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ ಮತ್ತು ಕನ್ನಡ, ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಹೆಚ್ಚುವರಿ 1,000 ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಮತ್ತು ಇವಿಗಳನ್ನು ಉತ್ತೇಜಿಸಲು ವಿಶೇಷ ಡ್ರೈವ್ ನಡೆಸಲಾಗುವುದು ಎಂದರು.
ಇನ್ನು ಚಾರ್ಜಿಂಗ್ ಘಟಕಗಳನ್ನು ಜಿಲ್ಲಾ ಕೇಂದ್ರಗಳು, ಪ್ರವಾಸಿ ಸ್ಥಳಗಳು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಥಾಪಿಸಲಾಗುವುದು. ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳಾವಕಾಶವನ್ನು ಒದಗಿಸುವಂತೆ ಸರ್ಕಾರಿ ಕಚೇರಿಗಳಿಗೆ ನಿರ್ದೇಶಿಸಲಾಗಿದೆ ಎಂದಿದ್ದಾರೆ.