ಗುಜರಾತ್, ಮೇ 08 (DaijiworldNews/DB): ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ದೇವಾಲಯವೊಂದರಲ್ಲಿ ಭಕ್ತಿಗೀತೆ ಮೊಳಗಿಸಲು ಸ್ಪೀಕರ್ ಬಳಕೆ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ಆರು ಮಂದಿ ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ಥಳಿಸಿ ಕೊಲೆ ಮಾಡಿದ ಘಟನೆ ನಡೆದಿದೆ.
42 ವರ್ಷದ ಜಸ್ವಂತ್ ಠಾಕೂರ್ ಕೊಲೆಯಾದ ವ್ಯಕ್ತಿ. ಮೇ 3 ರಂದು ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ ಎಂದು ಲಂಗ್ನಾಜ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಸ್. ಬಿ. ಚಾವ್ಡಾ ತಿಳಿಸಿದ್ದಾರೆ.
ಇಲ್ಲಿನ ಸಣ್ಣ ದೇವಾಲಯವೊಂದರಲ್ಲಿ ಸ್ಪೀಕರ್ ಬಳಕೆ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಠಾಕೂರ್ ಸಹೋದರ ಅಜಿತ್ ಸ್ಪೀಕರ್ನಲ್ಲಿ ಭಕ್ತಿಗೀತೆ ಹಾಕಿದ್ದಾರೆ. ಸ್ಪೀಕರ್ ಬಳಕೆಯಿಂದ ಅಸಮಾಧಾನಗೊಂಡ ಇನ್ನೊಂದು ಗ್ರಾಮದ ಸಾದಾಜಿ ಠಾಕೂರ್ ಇದನ್ನು ಆಕ್ಷೇಪಿಸಿದ್ದು, ಶಬ್ದ ಕಡಿಮೆ ಮಾಡಲಾಗಿದೆ ಎಂದು ಅಜಿತ್ ಹೇಳಿದರೂ ಕೇಳದೆ ಅಜಿತ್ ಮೇಲೆ ಎರಗಿದ್ದಾರೆ. ಈ ವೇಳೆ ಜಸ್ವಂತ್ ಠಾಕೂರ್ ಮತ್ತು ಅಜಿತ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಜಸ್ವಂತ್ ಅವರಿಗೆ ಆರು ಮಂದಿ ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಈ ವೇಳೆ ಹಲ್ಲೆ ತಡೆಯಲು ಬಂದ ಠಾಕೂರ್ ಅವರ ಸಹೋದರ ಅಜಿತ್ಗೂ ದುಷ್ಕರ್ಮಿಗಳು ಹೊಡೆದಿದ್ದು, ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಗಾಯಾಳುಗಳನ್ನು ತತ್ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜಸ್ವಂತ್ ಸಾವನ್ನಪ್ಪಿದ್ದಾರೆ. ಅಜಿತ್ ಚಿಕಿತ್ಸೆ ಪಡೆಯುತ್ತಿದ್ದಾರೆ.