ಹುಬ್ಬಳ್ಳಿ, ಮೇ 08 (DaijiworldNews/HR): ಹಣ ನೀಡಿ ಮುಖ್ಯಮಂತ್ರಿ ಸ್ಥಾನ ಪಡೆಯುವ ಪದ್ಧತಿ ಬಿಜೆಪಿಯಲ್ಲಿಲ್ಲ ಆದರೆ ಕಾಂಗ್ರೆಸ್ನಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದು, ಈ ವಿಚಾರದಲ್ಲಿ ವಿವಾದ ಮುಂದುವರಿಸುವುದು ಅನಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಯಾರೋ ಮಧ್ಯವರ್ತಿಗಳು ಭೇಟಿ ಮಾಡಿಸುತ್ತೇನೆ ಎಂದು ಹೇಳಿದ್ದರು. ಅದನ್ನು ನಾನು ನಿರಾಕರಿಸಿದ್ದೆ ಎಂದು ಯತ್ನಾಳ ಸ್ಪಷ್ಟಪಡಿಸಿದ್ದಾರೆ ಎಂದರು.
ಇನ್ನು ಪಿಎಸ್ಐ ವಿಚಾರದಲ್ಲಿ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ಮಾಡುವುದು ಬೇಡ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದು, ಕಾಂಗ್ರೆಸ್ನ ಬ್ಲಾಕ್ ಸಮಿತಿ ಅಧ್ಯಕ್ಷ ಸೇರಿದಂತೆ ಹಲವರು ಶಾಮೀಲಾಗಿದ್ದಾರೆ. ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ನ್ಯಾಯಾಂಗ ತನಿಖೆ ಮಾಡಿದರೆ ಬಂಧನವಾಗುವುದಿಲ್ಲ. ಹೆಚ್ಚು ಸಮಯ ಆಗುತ್ತದೆ ಎನ್ನುವುದು ಕಾಂಗ್ರೆಸ್ನವರ ಲೆಕ್ಕಾಚಾರವಾಗಿದೆ ಎಂದಿದ್ದಾರೆ.