ಬೆಂಗಳೂರು, ಮೇ 07 (DaijiworldNews/HR): ಕೇಂದ್ರ ಸರ್ಕಾರ ಜನಸಮಾನ್ಯರ ಬದುಕಿಗೆ ಬೆಲೆಯೇರಿಕೆಯ ಕೊಳ್ಳಿ ಇಟ್ಟಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂಪಾಯಿಗೇರಿಸಿದ ಪರಿಣಾಮ ಜನಸಾಮಾನ್ಯರ ಬದುಕು ಇನ್ನಷ್ಟು ದುಸ್ಥರವಾಗಿದೆ. ಈಗ ಗ್ಯಾಸ್ ಸಿಲಿಂಡರ್ ವೊಂದರ ಬೆಲೆ ಒಂದು ಸಾವಿರ ರೂಪಾಯಿಗೆ ಕೇವಲ 50 ಪೈಸೆ ಕಡಿಮೆ!! ಅಚ್ಚೇ ದಿನ್ ಅಲ್ವಾ ಎಂಬುದಾಗಿ ಶಾಸಕ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದಿನನಿತ್ಯ ಏರುತ್ತಿರುವ ಪೆಟ್ರೋಲ್, ಡೀಸಲ್ ಬೆಲೆಯೊಂದಿಗೆ ಗ್ಯಾಸ್ ಬೆಲೆ ಏರಿಕೆ ಕಂಡಿದ್ದು, ಇದು ಡಬ್ಬಲ್ ಇಂಜಿನಿ ಸರ್ಕಾರ ಜನಸಾಮಾನ್ಯರಿಗೆ ನೀಡಿದ ಡಬ್ಬಲ್ ಬಳುವಳಿ!!? ಅಗತ್ಯ ವಸ್ತುಗಳ ಬಲೆ ಏರಿಕೆಯಿಂದ ಜನರು ಪ್ರತಿನಿತ್ಯ ಒಪ್ಪತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ಇತ್ತು, ಗ್ಯಾಸ್ ಬೆಲೆಯೇರಿಕೆ ಅವರನ್ನು ಇನ್ನಷ್ಟು ಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಒಂದು ವಾರದ ಹಿಂದೆಯಷ್ಟೇ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆ ಕಂಡಿದ್ದು, ಈಗದು 2355.50 ರೂಪಾಯಿಯಾಗಿದೆ, ಇದರಿಂದ ಹೋಟೆಲ್ ತಿನಿಸಿನ ಬೆಲೆಯೇರಿದೆ. ಇದು ಹೀಗೆಯೇ ಮುಂದುವರೆದರೆ ಇತ್ತ ಮನೆಗೂ ಗ್ಯಾಸ್ ಖರೀದಿಸಲಾಗದೆ, ಅತ್ತ ಹೋಟೆಲ್ ಗೂ ಹೋಗಲಾಗದೆ ಜನ ಉಪವಾಸ ಕೂರಬೇಕಾಗುತ್ತದೆ ಎಂದಿದ್ದಾರೆ.
ಇದು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತರುವ ಬಿಜೆಪಿ ಪಕ್ಷದ ಡಬ್ಬಲ್ ಇಂಜಿನ್ ಸರ್ಕಾರಗಳ ಗಿಫ್ಟ್, ವಿರೋಧ ಪಕ್ಷಗಳ ಹೋರಾಟಕ್ಕೆ ಈ ಸರ್ಕಾರಗಳು ಕಿವಿಗೊಡುತ್ತಿಲ್ಲ, ಹಾಗಾಗಿ ಜನಸಾಮಾನ್ಯರೇ ಬೀದಿಗಿಳಿದು ಈ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದು ಎಚ್ಚರಿಸಿದ್ದಾರೆ.