ಬೆಂಗಳೂರು, ಮೇ 07 (DaijiworldNews/DB): ಬಿಜೆಪಿ ಸೇರುವ ಶಾಸಕರ ಇನ್ನೊಂದು ಪಟ್ಟಿ ಸಿದ್ದವಾಗಿದ್ದು, ಎದುರಾಗಿರುವ ತಾಂತ್ರಿಕ ಸಮಸ್ಯೆ ನಿವಾರಿಸಿಕೊಂಡು ಪಕ್ಷಕ್ಕೆ ಅವರನ್ನು ಬರಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ನ ಹಲವು ಶಾಸಕರು ಬಿಜೆಪಿ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಕೆಲವರು ಸೇರ್ಪಡೆ ಆಗಿದ್ದು, ಇನ್ನು ಸೇರ್ಪಡೆಗೊಳ್ಳಲಿರುವವರ ಪಟ್ಟಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಬಳಿ ಇದೆ. ಆದರೆ ಅವರ ಸೇರ್ಪಡೆಗೆ ಕೆಲವೊಂದು ತಾಂತ್ರಿಕ ತೊಡಕುಗಳು ಎದುರಾಗಿದ್ದು, ಆ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದರು.
ಶಾಸಕರ ಬಿಜೆಪಿ ಸೇರ್ಪಡೆಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಬಗೆಹರಿಸಲಿದ್ದಾರೆ. ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ನಾಯಕರು ಯಾವುದೇ ಷರತ್ತು ಹಾಕದೆ ಪಕ್ಷ ಸೇರಿದ್ದಾರೆ. ಇನ್ನೂ ಕೆಲವರನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ150 ಸ್ಥಾನ ಗೆಲ್ಲಲೇಬೇಕೆಂಬ ಟಾರ್ಗೆಟ್ನ್ನು ಹೈಕಮಾಂಡ್ ನೀಡಿದೆ. ಅಮಿತ್ ಶಾ ಮತ್ತು ಬಿ.ಎಲ್. ಸಂತೋಷ್ ಅವರು ಈಗಾಗಲೇ ಶಾಸಕರ ಪಕ್ಷ ಸೇರ್ಪಡೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎಂದು ಅಶೋಕ್ ತಿಳಿಸಿದರು.