ಅಹಮದಾಬಾದ್, ಮೇ 07 (DaijiworldNews/DB): ಗುಜರಾತ್ನಲ್ಲಿ ಚುನಾವಣೆ ನಡೆದು ಒಂದು ವರ್ಷದ ನಂತರ ನಡೆದ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಭೇರಿ ಭಾರಿಸಿದ್ದು, ಮರು ಮತ ಎಣಿಕೆಗೆ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ ಅಭ್ಯರ್ಥಿ ಸೋಲುಂಡಿದ್ದಾರೆ.
ಗುಜರಾತ್ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ಗೆ ಜನವರಿ 2021ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೀತಾಬೆನ್ ಚಾವ್ಡಾಗೆಲುವು ಸಾಧಿಸಿದ್ದರು. ಆದರೆ ಇದರಿಂದ ಅಸಮಾಧಾನಗೊಂಡ ಕುಬೇರನಗರದ ವಾರ್ಡ್ ಸಂಖ್ಯೆ 14 ರ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಮೊಹ್ನಾನಿ ಮತಗಳ ಮರು ಎಣಿಕೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮತಗಳ ಮರು ಎಣಿಕೆಗೆ ಆದೇಶಿಸಿತ್ತು. ಅದರಂತೆ ಚುನಾವಣಾ ಆಯೋಗ ಮತಗಳ ಮರು ಎಣಿಕೆ ಮಾಡಿದ್ದು, ಮರು ಮತ ಎಣಿಕೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಗೀತಾಬೆನ್ ಚಾವ್ಡಾ ಜಯ ಗಳಿಸಿದ್ದಾರೆ.
ಮೊದಲ ಬಾರಿಗೆ ನಡೆದ ಮತ ಎಣಿಕೆಯಲ್ಲಿ ಗೀತಾಬೆನ್ ಚಾವ್ಡಾ ಅವರು 17,656 ಮತ ಪಡೆದರೆ, ಮೊಹ್ನಾನಿ 16,992 ಮತಗಳನ್ನು ಪಡೆದಿದ್ದರು. ಈ ಬಾರಿ ನಡೆದ ಮರು ಮತ ಎಣಿಕೆಯಲ್ಲಿಯೂ ಈ ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.