ಬೆಂಗಳೂರು,ಮೇ 07 (DaijiworldNews/HR): ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ವಾಗಿ ವಶಕ್ಕೆ ಪಡೆದು ತನಿಖೆ ನಡೆಸಲು ಸಿಐಡಿಗೆ ಸೂಚನೆ ನೀಡಲಾಗಿದ್ದು, ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾವುದೇ ಪಕ್ಷದ ಮುಖಂಡರು ಇರಲಿ ಅಥವಾ ಇನ್ಯಾರೇ ಇರಲಿ ಅವರನ್ನು ವಶಕ್ಕೆ ಪಡೆಯಬೇಕು ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಲಾಗಿದ್ದು, ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.
ಇನ್ನು ನಾನು ಈಗಲೂ ಕೂಡ ಮನವಿ ಮಾಡುವುದೇನೆಂದರೆ ಎಚ್.ಡಿ. ಕುಮಾರಸ್ವಾಮಿ ಅಥವಾ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರೇ ಇರಲಿ ನಿಮ್ಮ ಬಳಿ ದಾಖಲೆಗಳಿದ್ದರೆ ತನಿಖಾ ತಂಡಕ್ಕೆ ಕೊಡಬೇಕೆಂದು ಎಂದಿದ್ದಾರೆ.
ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ 300 ಕೋಟಿ, ಒಂದು ಸಾವಿರ ಕೋಟಿ ಹಗರಣ ನಡೆದಿದೆ ಎಂದು ಹೇಳುವುದು ಸುಲಭ. ಇದರಲ್ಲಿ ಕಿಂಗ್ಪಿನ್ಗಳಿದ್ದಾರೆ. ಪ್ರಭಾವಿಗಳಿದ್ದಾರೆ ಎಂದು ಆರೋಪ ಮಾಡುವ ಬದಲು ದಾಖಲೆಗಳನ್ನು ಕೊಟ್ಟರೆ ತನಿಖೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.