ಜಮ್ಶೆಡ್ಪುರ, ಮೇ 07 (DaijiworldNews/DB): ಭೀಕರ ಸ್ಫೋಟದೊಂದಿಗೆ ಭಾರಿ ಅಗ್ನಿ ಅವಘಡ ಸಂಭವಿಸಿದ ಘಟನೆ ಜಾರ್ಖಂಡ್ ನ ಜಮ್ಶೆಡ್ಪುರದಲ್ಲಿರುವ ಟಾಟಾ ಉಕ್ಕು ಕಾರ್ಖಾನೆಯಲ್ಲಿ ನಡೆದಿದೆ.
ಟಾಟಾ ಉಕ್ಕು ಕಾರ್ಖಾನೆಯ ಘಟಕದಲ್ಲಿ ಸಂಭವಿಸಿದ ಸ್ಪೋಟದ ತೀವ್ರತೆಗೆ ಘಟಕದ ಒಂದು ಭಾಗದಲ್ಲಿ ಅಗ್ನಿ ಆವರಿಸಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಬ್ಯಾಟರಿ ಸ್ಪೋಟವೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಐದು ಅಗ್ನಿಶಾಮಕದಳದ ವಾಹನ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದೆ. ಇಬ್ಬರು ಕಾರ್ಮಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಜಿಲ್ಲಾಡಳಿತವು ಘಟಕದ ಆಡಳಿತ ವರ್ಗದೊಂದಿಗೆ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
ನೌಕರನೋರ್ವ ಎದೆ ನೋವಾಗುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾನೆ. ಆತನಿಗೂ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯ ಆತನ ಸ್ಥಿತಿ ಸ್ಥಿರವಾಗಿದೆ ಎಂದು ಟಾಟಾ ಸ್ಟೀಲ್ ಸಂಸ್ಥೆ ಮಾಹಿತಿ ನೀಡಿದೆ.