ಶಿವಮೊಗ್ಗ, ಮೇ 07 (DaijiworldNews/DB): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿಯಿದೆ. ಆದರೆ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸುವುದು ನನ್ನ ಕೆಲಸ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ನಾನು ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಯಾರು, ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬುದನ್ನು ಪಕ್ಷವೇ ನಿರ್ಧರಿಸುತ್ತದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಮೇಲೆ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದನ್ನು ಸಿಎಂ ಬೊಮ್ಮಾಯಿ ನಿರ್ಧರಿಸಲಿದ್ದಾರೆ. ನನಗೆ ಸ್ಥಾನಮಾನ, ಜವಾಬ್ದಾರಿ ನೀಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ನನಗೆ ಸಚಿವ ಸ್ಥಾನ ನೀಡಬೇಕೆಂದು ತಂದೆ ಅಥವಾ ನಾನು ಯಾರ ಮೇಲೆಯೂ ಒತ್ತಡ ಹೇರಿಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.
ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಆ ಭಾಗಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇತಿಹಾಸ ನಿರ್ಮಾಣವಾಗುವುದು ಖಂಡಿತಾ. ಇದು ವರಿಷ್ಠರಿಗೆ ಮತ್ತು ರಾಜ್ಯ ನಾಯಕರಿಗೂ ತಿಳಿದಿರುವ ವಿಚಾರವೇ ಆಗಿದ್ದು, ಜನರ ಮಧ್ಯೆ ಬೆರೆತರೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಶಾಸಕರಾಗಿ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಶಾಸಕ ಯತ್ನಾಳ್ ಹೇಲಿಕೆಯನ್ನು ಕೇಂದ್ರ ನಾಯಕರು, ಸಿಎಂ ಮತ್ತು ರಾಜ್ಯಾಧ್ಯಕ್ಷರು ಗಮನಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವುದು, ಬಿಡುವುದು ಹಿರಿಯರಿಗೆ ಬಿಟ್ಟ ವಿಚಾರ ಎಂದವರು ಪ್ರಶ್ನೆಯೊಂದಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದರು.