ಬೆಂಗಳೂರು, ಮೇ 07 (DaijiworldNews/DB): ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ನೀಡಬೇಕೆಂಬ ಬೇಡಿಕೆ ಬಂದಿತ್ತು ಎಂದು ಶಾಸಕ ಯತ್ನಾಳ್ ಹೇಳಿರುವುದು ತಪ್ಪು. ಅವರ ಹೇಳಿಕೆ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಇಂತಹ ಹೇಳಿಕೆ ನೀಡುವುದರಿಂದ ವಿಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತವೆ. ಅನೇಕ ಹಿರಿಯರು, ಶಾಸಕರೆದುರೇ ಸಿಎಂ ಆಯ್ಕೆ ನಡೆದಿದೆಯೇ ಹೊರತು ಅದನ್ನು ಮರೆಮಾಚಿಲ್ಲ. ಒಟ್ಟಾರೆ ಮಾತನಾಡುವುದು ಸಲ್ಲ ಎಂದರು.
ಪಕ್ಷ ಹಾಗೂ ವೈಯಕ್ತಿಕ ಹಿತದೃಷ್ಟಿಯಿಂದ ತಮ್ಮ ಹೇಳಿಕೆ ಬಗ್ಗೆ ಯತ್ನಾಳ್ ಅವರೇ ಸ್ಪಷ್ಟನೆ ನೀಡಬೇಕು. ಬಿಜೆಪಿಯ ಉನ್ನತ ನಾಯಕತ್ವ ಹೇಗಿದೆ ಎಂಬುದು ಸಾಮಾನ್ಯ ಕಾರ್ಯಕರ್ತನಿಗೂ ತಿಳಿದಿರುವ ವಿಚಾರವೇ ಆಗಿದೆ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುವ ಮುನ್ನ ಆಲೋಚಿಸಬೇಕು ಎಂದವರು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಪಕ್ಷದ ಪ್ರಮುಖರೊಂದಿಗೆ ಸಮಾಲೋಚಿಸಿ ಬಳಿಕ ನಿರ್ಧರಿಸುತ್ತಾರೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.