ವಿಜಯಪುರ, ಮೇ 07 (DaijiworldNews/HR): ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ಹೇಳಿಕೆ ಜನರಲ್ ಆಗಿ ಮಾತನಾಡಿದ್ದೇನೆ ಹೊರತು ಯಾವುದೇ ಪಕ್ಷದ ಬಗ್ಗೆ ಮಾತನಾಡಿಲ್ಲ. ಹೀಗಿದ್ದು ನನ್ನ ವಿರುದ್ಧ ಯಾವ ಶಿಸ್ತುಕ್ರಮ ಕೈಗೊಳ್ಳುತ್ತಾರೆ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
2,500 ಕೋಟಿ ರೂ. ಸಜ್ಜು ಮಾಡಿಕೊಳ್ಳಿ ನಿಮ್ಮನ್ನು ಸಿಎಂ ಮಾಡ್ತೇವೆ ಎಂದು ದೆಹಲಿಯಿಂದ ಬಂದ ಕೆಲವರು ನನಗೆ ಹೇಳಿದ್ದರು ಎಂಬ ಬಸನಗೌಡ ಪಾಟೀಲ್ ಹೇಳಿಕೆ ವಿರುದ್ದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ನಾನು ನೀಡಿದ ಹೇಳಿಕೆ ಯಾವುದೇ ಪಕ್ಷ ಉದ್ದೇಶಿಸಿ ಅಲ್ಲ, ಜನರಲ್ ಹೇಳಿಕೆ ಎಂದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರೇ ಹೇಳಿದ್ದಾರೆ. ನಾನು ಹೇಳಿದ್ದು ಇನ್ ಜನರಲ್ ಆಗಿ ಹೊರತು ಯಾವುದೇ ಉದ್ದೇಶದಿಂದ ಅಲ್ಲ. ಹೀಗಿರುವಾಗ ನನ್ನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಕಾರಣವಾದರೂ ಏನು? ಎಂದು ಪ್ರಶ್ನಿಸಿದ್ದಾರೆ
ಇನ್ನು ನಾನು ಯಾವುದೇ ಪಾರ್ಟಿ ಬಗ್ಗೆ ಮಾತನಾಡಿಲ್ಲ. ಕ್ರಮ ಕೈಗೊಳ್ಳಲು ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಮಾಡಿದರೆ ಮಾಡಲಿ. ನಾನು ಅಲ್ಲಿಯೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.
ನನ್ನ ವಿರುದ್ಧ ಬಿಜೆಪಿ ಶಿಸ್ತುಕ್ರಮ ಕೈಗೊಂಡು, ಪಕ್ಷದಿಂದ ಹೊರಹಾಕಿ ವಿಜಯೇಂದ್ರಗೆ ಪಟ್ಟ ಕಟ್ಟಬೇಕು ಎಂಬುದು ಕೆಲ ಮಾಧ್ಯಮದವರ ಪ್ರಯತ್ನವಾಗಿದ್ದು, ಹಾಗಾಗಿ ನಾನು ಒಂದು ಹೇಳಿಕೆ ಕೊಟ್ಟರೆ ಅದನ್ನು ಬೇರೊಂದು ಅರ್ಥ ಕಲ್ಪಿಸಿ ಚರ್ಚಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.