ಕಲಬುರಗಿ, ಮೇ 07 (DaijiworldNews/HR): 545 ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿನ ಅಕ್ರಮ ತಡೆಯಲು ವಿಫಲರಾದ ಆರೋಪದ ಮೇರೆಗೆ ಇಬ್ಬರು ಡಿಎಸ್ಪಿ, ಇನ್ಸ್ ಪೆ ಕ್ಟರ್, ಇಬ್ಬರು ಪಿಎಸ್ಐ ಸೇರಿ 12 ಪೊಲಿಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಂಎಸ್ಐ ಕಾಲೇಜನ ಪರೀಕ್ಷಾ ಕೇಂದ್ರದಲ್ಲಿ ಕಳೆದ ಆಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಹಾಗೂ ಒಎಂಆರ್ ಶೀಟ್ ತಿದ್ದುಪಡಿ ಜತೆಗೇ ಪರೀಕ್ಷೆ ಮುಗಿದ ನಂತರವೂ ಉತ್ತರ ಬರೆದಿರುವುದು ಸೇರಿದಂತೆ ಇತರ ಅಕ್ರಮಗಳನ್ನು ತಡೆಯಲು ವಿಫಲರಾಗಿದ್ದನ್ನು ಪರಿಗಣಿಸಿ ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿರುವ ಡಿಎಸ್ಪಿ ಮಲ್ಲಿಕಾರ್ಜುನ ಸಾಲಿ, ಇನ್ಸ್ ಪೆಕ್ಟರ್ ಮೇತ್ರೆ ಅವರನ್ನು ಅಮಾನತುಗೊಳಿಸಲಾಗಿದ್ದು, ಪಿಎಸ್ಐಗಳಾದ ಶೈಲಮ್ಮ, ನಜಮಾ ಸುಲ್ತಾನ್, ಎಎಸ್ಐಗಳಾದ ಶಶಿಕುಮಾರ್, ಲತಾ ಹಾಗೂ ಮುಖ್ಯ ಪೇದೆಗಳಾದ ಜೈ ಭೀಮ, ಪಾರುಬಾಯಿ ಶರಣಬಸಪ್ಪ, ದಾಮೋದರ, ಪಿಸಿಗಳಾದ ಪ್ರದೀಪ ಹಾಗೂ ರಾಜಶ್ರೀ ಅವರು ಅಮಾನತುಗೊಂಡಿದ್ದಾರೆ.