ಕೋಲ್ಕತ್ತಾ, ಮೇ 07 (DaijiworldNews/DB): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ತಮ್ಮ ಮನೆಯಲ್ಲಿ ಮನೆಯಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿರುವುದು ಗಂಗೂಲಿ ಬಿಜೆಪಿ ಸೇರ್ಪಡೆ ಬಗ್ಗೆ ಮತ್ತೆ ಬಿಸಿಬಿಸಿ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ ಈ ವಿಚಾರವನ್ನು ಗಂಗೂಲಿ ತಳ್ಳಿ ಹಾಕಿದ್ದಾರೆ.
ಕೋಲ್ಕತ್ತಾ ಪ್ರವಾಸದಲ್ಲಿರುವ ಅಮಿತ್ ಶಾ ಶನಿವಾರ ರಾತ್ರಿ ಬಿಸಿಸಿಐ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಿವಾಸದಲ್ಲಿ ಭೋಜನ ಆತಿಥ್ಯ ಸ್ವೀಕರಿಸಿದರು. ಈ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಗಂಗೂಲಿ ಬಿಜೆಪಿ ಸೇರ್ಪಡೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಲೆಂದೇ ಅಮಿತ್ ಶಾ ಗಂಗೂಲಿ ಮನೆಗೆ ತೆರಳಿರುವುದು ಎಂದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳು ಎದ್ದಿವೆ. ಆದರೆ, ಈ ಎಲ್ಲಾ ಊಹಾಪೋಹಗಳನ್ನು ತಳ್ಳಿ ಹಾಕಿರುವ ಗಂಗೂಲಿ, ಇದೊಂದು ಸೌಜನ್ಯದ ಭೇಟಿ. ರಾಜಕೀಯ ವಿಷಯ ಚರ್ಚೆಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಭೋಜನ ಕೂಡದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ನನ್ನ ಸಹದ್ಯೋಗಿ. ಅಲ್ಲದೆ, ಕಳೆದ ಒಂದು ದಶಕದಿಂದ ಶಾ ಅವರೊಂದಿಗೆ ನಿಕಟವಾಗಿದ್ದೇನೆ ಮತ್ತು ಹಲವು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಹಾಗಾಗಿ ಇಂದೊಂದು ಸೌಜನ್ಯದ ಭೇಟಿಯಾಗಿದ್ದು, ರಾಜಕೀಯ ವಿಚಾರ ಇಲ್ಲಿ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗಂಗೂಲಿ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಈ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನವೇ ಚರ್ಚೆಯಾಗಿತ್ತು. ಅಲ್ಲದೆ, ಅವರು ಚುನಾವಣೆಗೆ ಸ್ಪರ್ಧಿಸಲಿದ್ದು, ದಾದಾ ವರ್ಸಸ್ ದೀದಿ ಎಂದು ಪ್ರಚಾರ ಕಾರ್ಯವೂ ಆರಂಭವಾಗಿತ್ತು. ಆದರೆ ಈ ಎಲ್ಲಾ ಸುದ್ದಿಗಳನ್ನು ಗಂಗೂಲಿ ತಳ್ಳಿ ಹಾಕಿದ್ದರು.