ನವದೆಹಲಿ, ಮೇ 07 (DaijiworldNews/DB): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿಗೆ ದೆಹಲಿಯ ನ್ಯಾಯಾಲಯವೊಂದು ಶನಿವಾರ ಜಾಮೀನುರಹಿತ ವಾರೆಂಟ್ ಹೊರಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಕಲ್ಲಿದ್ದಲು ಹಗರಣ ಆರೋಪದಲ್ಲಿ ಹಣ ವರ್ಗಾವಣೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುರವಂತೆ ರುಜಿರಾಗೆ ಹಲವು ಬಾರಿ ನೊಟೀಸ್ ಕಳುಹಿಸಲಾಗಿತ್ತು. ಆದರೆ ತನಿಖಾ ಏಜೆನ್ಸಿ ಅಥವಾ ನ್ಯಾಯಾಲಯದ ಮುಂದೆ ಅವರು ತನಿಖೆಗೆ ಹಾಜರಾಗಿರಲಿಲ್ಲ. ಹೀಗಾಗಿ ಏಜೆನ್ಸಿಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿಕೆ ನೀಡಿದ ನಂತರ ಜಾರಿ ನಿರ್ದೇಶನಾಲಯದ ದೂರಿನಂತೆ ದೆಹಲಿಯ ನ್ಯಾಯಾಲಯ ಅವರಿಗೆ ಜಾಮೀನುರಹಿತ ವಾರೆಂಟ್ ಹೊರಡಿಸಿತು. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧ ಸರ್ವರಿಯಾ ಆದೇಶ ನೀಡಿದರು. ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಯಿತು.
ಪಶ್ಚಿಮ ಬಂಗಾಳದ ಕುನುಸ್ಟೋರಿಯಾ, ಕಜೋರಾ ಮತ್ತು ಅಸನ್ಸೋಲ್ ಸುತ್ತಮುತ್ತಲ ಪ್ರದೇಶಗಳಲ್ಲಿನ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದಂತೆ ನಡೆದಿದ್ದ ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ 2020 ನವೆಂಬರ್ನಲ್ಲಿಸಿಬಿಐ ಎಫ್ಐಆರ್ ದಾಖಲಿಸಿತ್ತು. ಅದರಂತೆ ಅಭಿಷೇಕ್ ಬ್ಯಾನರ್ಜಿ ಪತ್ನಿ ವಿರುದ್ದ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿತ್ತು. ಆದರೆ ತಮ್ಮ ಮೇಲಿದ್ದ ಆರೋಪವನ್ನು ಬ್ಯಾನರ್ಜಿ ತಳ್ಳಿ ಹಾಕಿದ್ದರು.