ನವದೆಹಲಿ, ಮೇ 07 (DaijiworldNews/DB): ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ತಪ್ಪು ಮಾಹಿತಿ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಯಾವ ಮಾನದಂಡವನ್ನು ಅನುಸರಿಸಿ ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಅನುಸರಿಸಿದೆ ಎಂದು ಪ್ರಶ್ನಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ ತಪ್ಪು ಅಂಕಿ ಅಂಶವನ್ನು ಪ್ರಶ್ನಿಸಿ ಈಗಾಗಲೇ ಭಾರತ ಸರ್ಕಾರವು ತನ್ನ ಆಕ್ಷೇಪಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ. ಆದರೆ ಕಾಂಗ್ರೆಸ್ಸಿಗರು ಆರೋಗ್ಯ ಸಂಸ್ಥೆ ನೀಡಿದ ತಪ್ಪು ಲೆಕ್ಕಾಚಾರವನ್ನೇ ಹಿಡಿದುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಧಕ್ಕೆ ತರಲು 2014ರಿಂದಲೂ ರಾಹುಲ್ ಗಾಂಧಿಯತ್ನಿಸುತ್ತಿದ್ದಾರೆ. ಡಬ್ಲ್ಯೂಎಚ್ಒ ಹಾಗೂ ಕಾಂಗ್ರೆಸ್ ನೀಡಿರುವ ಅಂಕಿ ಅಂಶಗಳು ಎರಡೂ ಸರಿಯಿಲ್ಲ ಎಂದವರು ಟೀಕಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಭಾರತದಲ್ಲಿ ಕೋವಿಡ್ನಿಂದ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಇದು ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿದ ಸಾವಿನ ಸಂಖ್ಯೆಗಿಂತ10 ಪಟ್ಟು ಹೆಚ್ಚಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ವಿಶ್ವಸಂಸ್ಥೆ ಬಿಡುಗಡೆಗೊಳಿಸಿದ ಈ ಅಂಕಿಅಂಶವನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಆರೋಪದಲ್ಲಿ ತೊಡಗಿದ್ದರು.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಲೆಕ್ಕಾಚಾರದ ಪ್ರಕಾರ 2020ರಲ್ಲಿ 4.75 ಲಕ್ಷ ಮಂದಿ ಕೊರೊನಾ ಕಾಲದಲ್ಲಿ ಮೃತಪಟ್ಟಿದ್ದರು. ಆ ಪೈಕಿ ಕೋವಿಡ್-19 ಸೋಂಕಿಗೆ ಬಲಿಯಾದವರು1.42 ಲಕ್ಷ ಮಂದಿ ಎನ್ನಲಾಗಿದೆ.