ಬೆಂಗಳೂರು, ಮೇ 07 (DaijiworldNews/DB): ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದೇ ಬಿಜೆಪಿ ಸಾಧನೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿಯಾಗಬೇಕಾದರೆ 2500 ಕೋಟಿ ರೂ. ಕೊಡಿ ಎಂದು ದೆಹಲಿಯಿಂದ ಬಂದವರೊಬ್ಬರು ಆಮಿಷವೊಡ್ಡಿದ್ದರು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಟ್ವೀಟ್ ಮಾಡಿದ ಅವರು, ಸಿಎಂ ಹುದ್ದೆಗೆ- 2500 ಕೋಟಿ ರೂ., ಪಿಎಸ್ ಐ ಹುದ್ದೆಗೆ- 80 ಲಕ್ಷ ರೂ., ಮಂತ್ರಿಗಿರಿಗೆ- 50-70 ಕೋಟಿ ರೂ., ಕಾಮಗಾರಿಗಳಿಗೆ -40% ಕಮಿಷನ್, ಮಠಗಳಿಗೆ -30% ಕಮೀಷನ್, ವರ್ಗಾವಣೆಗೆ- ಫಿಕ್ಸೆಡ್ ರೇಟ್..ಇದು ಬಿಜೆಪಿ ಭ್ರಷ್ಟಾಚಾರದ ರೇಟ್ ಕಾರ್ಡ್ ಆಗಿದೆ. ಒಟ್ಟಿನಲ್ಲಿ ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದೇ ಬಿಜೆಪಿ ಸಾಧನೆ ಎಂದು ಬರೆದುಕೊಂಡಿದ್ದಾರೆ.
ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಾಸಕ ಯತ್ನಾಳ್, ದೆಹಲಿಯಿಂದ ಬಂದ ಕೆಲವರು ಮುಖ್ಯಮಂತ್ರಿ ಮಾಡಲು 2500 ಕೋಟಿ ರೂ. ಸಿದ್ದವಾಗಿಟ್ಟುಕೊಳ್ಳಿ ಎಂದಿದ್ದರು. ದಿ. ವಾಜಪೇಯಿ ಜೊತೆಗೆ ಕೆಲಸ ಮಾಡಿರುವ ಅನುಭವ ಇರುವ ನನ್ನನ್ನು ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್, ಅರುಣ್ ಗೌಡ ಅವರೆಲ್ಲ ಹೆಸರು ಹಿಡಿದೇ ಕರೆಯುತ್ತಿದ್ದಂತೆ. ಇಂತಹ ವ್ಯಕ್ತಿಯಾದ ನನ್ನಲ್ಲಿಯೇ ಮುಖ್ಯಮಂತ್ರಿ ಹುದ್ದೆಗಾಗಿ ಹಣದ ಬೇಡಿಕೆ ಇಡುತ್ತಿದ್ದಾರೆ. ಅಷ್ಟೊಂದು ಮೊತ್ತ ಎಂದರೆ ಏನು? ಅದನ್ನು ಯಾವ ಕೊಠಡಿಯಲ್ಲಿ ಇಡುವುದು, ಯಾವ ಗೋದಾಮಿನಲ್ಲಿ ಇಡುವುದು ಎಂದು ನಾನೇ ಅವರಿಗೆ ಮರುಪ್ರಶ್ನೆ ಹಾಕಿದ್ದೆ. ಇಂತಹ ಮೋಸ ಮಾಡುವವರ ಬಗ್ಗೆ ಎಚ್ಚರದಿಂದಿರಬೇಕು ಎಂದಿದ್ದರು. ಯತ್ನಾಳ್ ಈ ಹೇಳಿಕೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ನಾಯಕರು ಬಿಜೆಪಿಗರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ.