ಬೆಂಗಳೂರು, ಮೇ 07 (DaijiworldNews/MS): ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ರೂ. ಹಾಗೂ ಮಂತ್ರಿ ಆಗಬೇಕಾದರೆ 100 ಕೋಟಿ ರೂ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲರು ಬಹಿರಂಗವಾಗಿ ಹೇಳಿದ್ದಾರೆ. ಅವರ ಹೇಳಿಕೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ, ಉನ್ನತ ಮಟ್ಟದ ತನಿಖೆ ಆಗಬೇಕುಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.
ಇಲ್ಲಿನ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದು ಹಾಲಿ ಶಾಸಕರು ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು. ಬಿಜೆಪಿಯಿಂದ ಸಂವಿಧಾನ ಸುಡುವ ಕೆಲಸವಾಗುತ್ತಿದೆ. ಮುಖ್ಯಮಂತ್ರಿ ಯಾರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಅಲ್ಲದೆ ಯತ್ನಾಳ್ ಅವರನ್ನು ಕೂಡಲೇ ವಶಕ್ಕೆ ಪಡೆಯಬೇಕು. ಅವರನ್ನ ಸಾಕ್ಷಿಯಾಗಿಸಿಕೊಂಡು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಯತ್ನಾಳ್ ಅವರು ಈ ರೀತಿ ಹೇಳಿಕೆ ನೀಡಲು ಮಾನಸಿಕ ಅಸ್ವಸ್ಥರಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲರೂ ಭ್ರಷ್ಟರ ರಕ್ಷಣೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಬಿಜೆಪಿಯವರು ಸಾಲು, ಸಾಲು ಹಗರಣ ಮಾಡುತ್ತಿದ್ದಾರೆ. ಹೋಟೆಲ್ನಲ್ಲಿ ತಿಂಡಿಗೆ ದರ ನಿಗದಿ ಮಾಡುವಂತೆ ಸರ್ಕಾರಿ ಹುದ್ದೆಗಳು ಸೇಲ್ ಆಗುತ್ತಿವೆ ಎಂದು ಆರೋಪಿಸಿದರು.