ಬೆಂಗಳೂರು, ಮೇ 06 (DaijiworldNews/DB): ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದ ಬಗ್ಗೆ ಎಡಿಜಿಪಿ ಬಾಯ್ಬಿಟ್ಟರೆ ರಾಷ್ಟ್ರೀಯ ಪಕ್ಷಗಳೆರಡರ ನಾಯಕರು ಜೈಲಿಗೆ ಹೋಗುವುದು ಖಂಡಿತಾ ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಆಮ್ ಆದ್ಮಿಪಕ್ಷದ ಮುಖಂಡ ಭಾಸ್ಕರ್ ರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದಲ್ಲಿ ಈಗಾಗಲೇ ಪ್ರಭಾವಿ ಸಚಿವರ ಹೆಸರು ಕೇಳಿ ಬರುತ್ತಿದೆ. ಎಡಿಜಿಪಿ ಅವರು ಮಾತನಾಡಿದರೆ ಕಾಂಗ್ರೆಸ್ ಮತ್ತು ಬಿಜೆಪಿಯ ಹಲವು ನಾಯಕರ ಹೆಸರು ಕೇಳಿ ಬರಲಿದೆ ಮತ್ತು ಅವರೆಲ್ಲರೂ ಜೈಲಿಗೆ ಹೋಗುವುದು ಖಚಿತ. ಆದರೆ ಈ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದರು.
ತನಿಖಾ ಸಂಸ್ಥೆಗಳು ಸರ್ಕಾರದ ಸುಪರ್ದಿಯಲ್ಲಿರುವುದರಿಂದ ಎಡಿಜಿಪಿಯನ್ನು ಮಾತನಾಡಲು ಬಿಡುವುದಿಲ್ಲ. ಈಗಾಗಲೇ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರ ವಿಫಲವಾಗಿರುವುದು ಗೊತ್ತಾಗಿದೆ. ಪಿಎಸ್ಐ ಹುದ್ದೆ ಅಕ್ರಮ ಪ್ರಕರಣದಲ್ಲಿಯೂ ಈ ರೀತಿಯಾಗಲು ಬಿಡಬೇಡಿ. ಸುಮಾರು ಅರ್ಧ ಲಕ್ಷ ಕುಟುಂಬಕ್ಕೆ ಈ ಹಗರಣದಿಂದಾಗಿ ಅನ್ಯಾಯ ಉಂಟಾಗಿದೆ. ನ್ಯಾಯಾಲಯದ ಸಮ್ಮುಖದಲ್ಲಿಯೇ ಇದರ ತನಿಖೆಯಾಗಿ ಸತ್ಯ ಹೊರಬರಬೇಕು ಎಂದವರು ಒತ್ತಾಯಿಸಿದರು.