ಕಲಬುರ್ಗಿ, ಮೇ 06 (DaijiworldNews/MS): ಪಿಎಸ್ ಐ ಅಕ್ರಮದ ಮೂಲ ಕಿಂಗ್ ಪಿನ್ ಉರುಳುತ್ತದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದು, ಕಿಂಗ್ ಪಿನ್ ಯಾರೆಂದು ಹೇಳಿ ತೊಂದರೆ ಇಲ್ಲ, ಸರ್ಕಾರ ಬಿದ್ದರೂ ಪರವಾಗಿಲ್ಲ ನಾವು ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.
ಚೆನ್ನಪಟ್ಟಣದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ , ಪಿಎಸ್ ಐ ಅಕ್ರಮದ ಮೂಲ ಕಿಂಗ್ ಪಿನ್ನನ್ನು ಟಚ್ ಮಾಡೋಕೂ ಆಗಲ್ಲ . ಹೀಗಾಗಿ ಆ ಕಿಂಗ್ ಪಿನ್ ಬಗ್ಗೆ ಯಾರೂ ಮಾತನಾಡಲು ಮುಂದಾಗಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆಗೆ ಕಲಬುರ್ಗಿಯಲ್ಲಿ ತಿರುಗೇಟು ನೀಡಿದ ಗೃಹ ಸಚಿವರು, 'ಕಿಂಗ್ ಪಿನ್ ಯಾರು ಎಂದು ಹೇಳಿದರೆ ಕ್ರಮ ಕೈಗೊಳ್ತೇವೆ. ಸರ್ಕಾರ ಉರುಳಿದರೂ ತೊಂದರೆ ಇಲ್ಲ. ಯಾಕಂದ್ರೆ, ಕುಮಾರಸ್ವಾಮಿ ಬರೀ ಹಿಟ್ ಅಂಡ್ ರನ್ ಮಾಡಬಾರದು. ಕಿಂಗ್ ಪಿನ್ ಯಾರು ಎಂದು ಹೇಳಿದರೆ ಕ್ರಮ ಕೈಗೊಳ್ಳುತ್ತೇವೆ. ಇನ್ನು ದಾಖಲೆ ಇದ್ದರೆ ನಮಗೆ ಕೊಡಲಿ, ನಾವು ತನಿಖೆ ನಡೆಸುತ್ತೇವೆ' ಎಂದಿದ್ದಾರೆ.
ಈ ಪ್ರಕರಣದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆಯ ಬೆಂಬಲಿಗರೇ ಕಿಂಗ್ ಪಿನ್. ಈಗಾಗಲೇ ಸಿಐಡಿ 3 ನೋಟಿಸ್ ನೀಡಿದ್ದು ಅದಕ್ಕೆ ಉತ್ತರ ಕೊಡಲು ಬರುತ್ತಿಲ್ಲ. ಅಲ್ಲದೆ ಸರ್ಕಾರಕ್ಕಿಂತ ಹೆಚ್ಚಿನ ಮಾಹಿತಿ ಇರುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಸಿಐಡಿ ಬಳಿ ಬಂದು ಮಾಹಿತಿ ನೀಡಲಿ ಎಂದು ಹೇಳಿದ್ದಾರೆ.