ಜಮ್ಮು, ಮೇ 06 (DaijiworldNews/DB): ಪಾಕಿಸ್ತಾನದ 200 ಮಂದಿ ಸೈನಿಕರು ಗಡಿ ದಾಟಿ ಜಮ್ಮು-ಕಾಶ್ಮೀರ ಪ್ರವೇಶಿಸಲು ಸಜ್ಜಾಗಿರುವ ಕುರಿತು ಮಾಹಿತಿ ಬಂದಿದೆ ಎಂದು ಉತ್ತರ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮಾಧ್ಯಮಗಳಿಗೆ ಶುಕ್ರವಾರ ಈ ಮಾಹಿತಿ ನೀಡಿರುವ ಅವರು, ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಉಗ್ರರ ಒಳ ನುಸುಳುವಿಕೆ ನಿಯಂತ್ರಣಕ್ಕೆ ಬಂದಿದೆ. ತರಬೇತಿ ಪಡೆದ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ, ಫೆಬ್ರವರಿ 2021ರ ಒಪ್ಪಂದದ ಬಳಿಕ ಇಂಡೋ-ಪಾಕ್ ಗಡಿಯಲ್ಲಿ ಕದನ ವಿರಾಮ ಸುಸ್ಥಿತಿಯಲ್ಲಿದೆ. ಆದರೆ, ಪಾಕ್ ಸೈನಿಕರು ಅಕ್ರಮವಾಗಿ ಪ್ರವೇಶಿಸಲು ಸಿದ್ದರಾಗಿದ್ದರು ಎಂದರು.
ಕದನ ವಿರಾಮ ಉಲ್ಲಂಘನೆ ಪ್ರಕರಣ ಕಳೆದೊಂದು ವರ್ಷದಿಂದ ಕಡಿಮೆಯಾಗಿದೆ. ಈ ವರ್ಷ 21 ಮಂದಿ ಭಯೋತ್ಪಾದಕರನ್ನು ಭಾರತೀಯ ಸೇನೆ ಹತ್ಯೆಗೈದಿದೆ. ಉಗ್ರರ ಆರು ಬೃಹತ್ ಶಿಬಿರ ಮತ್ತು 29 ಕಿರು ಕ್ಯಾಂಪ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದವರು ಮಾಹಿತಿ ನೀಡಿದ್ದಾರೆ.