ಹೈದರಾಬಾದ್, ಮೇ 06 (DaijiworldNews/DB): ಪತಿಯನ್ನು ಹಿಂಸೆ ನೀಡಿ ಹತ್ಯೆ ಮಾಡುತ್ತಿದ್ದರೂ, ಜನ ವೀಡಿಯೋ, ಫೋಟೋ ತೆಗೆದುಕೊಂಡಿದ್ದರೇ ಹೊರತು ಯಾರೂ ನೆರವಿಗೆ ಬರಲಿಲ್ಲ ಎಂದು ಹೈದರಾಬಾದ್ನ ಮಹಿಳೆ ಸೈಯದ್ ಆಶ್ರಿನ್ ಸುಲ್ತಾನಾ ಕಣ್ಣೀರು ಹಾಕಿದ್ದಾರೆ.
ಅನ್ಯಕೋಮಿನ ಯುವಕನನ್ನು ಮದುವೆಯಾದ ಕಾರಣಕ್ಕಾಗಿ ಸುಲ್ತಾನಾಳ ಸಹೋದರನಿಂದ ಕಣ್ಣೆದುರೇ ಹತ್ಯೆಯಾದ ಪತಿ ನಾಗರಾಜು ಅವರ ಕೊಲೆ ಪ್ರಕರಣ ಕುರಿತಂತೆ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ಪತಿಯನ್ನು ನಡು ರಸ್ತೆಯಲ್ಲೇ ಅತ್ಯಂತ ಕ್ರೂರವಾಗಿ ನನ್ನ ಸಹೋದರ ಮತ್ತಾತನ ಸಹಚರರು ಹತ್ಯೆ ಮಾಡಿದ್ದಾರೆ. ಆದರೆ, ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುವುದರಲ್ಲೇ ಜನರು ತಲ್ಲೀನರಾಗಿದ್ದರು. ಯಾರೊಬ್ಬರೂ ನೆರವಿಗೆ ಬರಲಿಲ್ಲ. ಪತಿ ಕೊನೆಯುಸಿರೆಳೆದ ಮೇಲೆ ಜನ ಸುತ್ತುವರಿದರು. ಪೊಲೀಸರು ಕೂಡಾ ಘಟನೆ ನಡೆದ ಸುಮಾರು ಅರ್ಧ ಗಂಟೆ ತಡವಾಗಿ ಆಗಮಿಸಿದ್ದರು. ಈ ವೇಳೆಗಾಗಲೇ ಹತ್ಯೆ ಮಾಡಿದವರು ಬಹುದೂರ ಸಾಗಿಯಾಗಿತ್ತು ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ಪತಿ ಮತ್ತು ನಾನು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಸಹೋದರ ಮೊಬಿನ್ ಅಹಮ್ಮದ್ ಮತ್ತು ಆತನ ಸಹಚರ ಮೊಹಮ್ಮದ್ ಮಸೂದ್ ಅಹಮ್ಮದ್ ಅಡ್ಡಗಟ್ಟಿ ಕಬ್ಬಿಣದ ಸರಳಿನಿಂದ ಪತಿಗೆ ಹೊಡೆದು ಬಳಿಕ ಚಾಕುವಿನಿಂದ ಇರಿದಿದ್ದಾರೆ. ಸಹಾಯಕ್ಕಾಗಿ ಎಷ್ಟೇ ಕೂಗಿದರೂ, ಜನನಿಬಿಡ ಮತ್ತು ವಾಹನನಿಬಿಡ ರಸ್ತೆಯಲ್ಲಿ ಯಾರೊಬ್ಬರೂ ಬರಲಿಲ್ಲ. ಸಹಾಯ ಮಾಡಿದ್ದರೆ ಪತಿ ಬದುಕುತ್ತಿದ್ದರು. ಕಣ್ಣೆದುರೇ ಪತಿಯನ್ನು ಇಷ್ಟು ಕ್ರೂರವಾಗಿ ಸಾಯಿಸಿರುವುದನ್ನು ನೋಡಿ ದಿಕ್ಕೇ ತೋಚದಾಗಿದೆ ಎಂದವರು ಹತಾಶೆಯಿಂದ ಹೇಳಿಕೊಂಡಿದ್ದಾರೆ.