ಅಸ್ಸಾಂ, ಮೇ 06 (DaijiworldNews/DB): ನಿಶ್ಚಯ ಮಾಡಿಕೊಂಡಿದ್ದ ಯುವಕ ವಂಚಕ ಎಂದು ತಿಳಿದ ತತ್ಕ್ಷಣ ಪೊಲೀಸ್ ಅಧಿಕಾರಿಯಾಗಿದ್ದ ಯುವತಿಯು ಮದುವೆಯಾಗಬೇಕಿದ್ದ ಯುವಕನ ವಿರುದ್ದ ಎಫ್ಐಆರ್ ದಾಖಲಿಸಿ ಜೈಲಿಗಟ್ಟಿದ ಪ್ರಸಂಗ ಅಸ್ಸಾಂನಲ್ಲಿ ನಡೆದಿದೆ.
ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವ ಜುನ್ಮೋನಿ ರಾಭಾ ಅವರೇ ತಾನು ಮದುವೆಯಾಗಬೇಕಿರುವ ಯುವಕ ರಾಣಾ ಪೊಗಾಗ್ ಎಂಬಾತನನ್ನು ಜೈಲಿಗಟ್ಟಿದವರು.
ರಾಣಾ ತಾನೊಬ್ಬ ಒಎನ್ಜಿಸಿ ಅಧಿಕಾರಿ ಎಂದು ಪರಿಚಯಿಸಿಕೊಂಡು ಜುನ್ಮೋನಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಕ್ರಮೇಣ ಆತ ಇದೇ ವಿಚಾರದಲ್ಲಿ ಹಲವರಿಗೆ ಹಣಕಾಸಿನ ವಂಚನೆ ಮಾಡಿರುವುದು ಜುನ್ಮೋನಿಗೆ ಗೊತ್ತಾಗಿದೆ. ತಾನು ಅಸ್ಸಾಂನಲ್ಲಿ ಒಎನ್ಜಿಸಿ ಅಧಿಕಾರಿಯಾಗಿದ್ದು, ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಲವರಿಂದ ಹಣ ಪಡೆದುಕೊಂಡಿದ್ದು, ಕೋಟ್ಯಾಂತರ ರೂ. ವಂಚಿಸಿದ್ದ. ಆದರೆ ನಿಶ್ಚಯದ ಬಳಿಕ ಈ ವಿಚಾರ ಜುನ್ಮೋನಿಗೆ ತಿಳಿಯಲ್ಪಟ್ಟಿದ್ದು, ರಾಣಾನ ಬ್ಯಾಗ್ ಪರಿಶೀಲನೆ ಮಾಡಿರುವಾಗ ಒಎನ್ಜಿಸಿಯ ಕೆಲವು ನಕಲಿ ಸೀಲುಗಳು ಮತ್ತು ದಾಖಲೆಗಳು ಕೂಡಾ ಪತ್ತೆಯಾಗಿದ್ದವು. ಕೂಡಲೇ ಮದುವೆಯಾಗಬೇಕಿದ್ದ ಯುವಕನ ವಿರುದ್ದವೇ ಜುನ್ಮೋನಿ ಎಫ್ಐಆರ್ ದಾಖಲಿಸಿದ್ದಾರೆ. ಬಳಿಕ ಆತನನ್ನು ಬಂಧಿಸಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ವಿಚಾರಣೆ ನಡೆಸಿ ಆತನನ್ನು ಎರಡು ದಿನಗಳ ಪೊಲೀಸ್ ವಶಕ್ಕೆ ನೀಡಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.