ಬೆಂಗಳೂರು, ಮೇ 06 (DaijiworldNews/DB): ಭಾರತದಲ್ಲಿ ಸುಮಾರು 47 ಲಕ್ಷ ಜನರು ಕೊರೊನಾ ಕಾಲದಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾದಿಂದಾಗಿ ಇಷ್ಟೊಂದು ಜನ ಜೀವ ಕಳೆದುಕೊಂಡಿದ್ದರೂ, ಆದರೆ ಕೇವಲ 4.8 ಲಕ್ಷ ಕೊರೊನಾದಿಂದ ಭಾರತದಲ್ಲಿ ಸಾವನ್ನಪ್ಪಿರುವುದು ಎಂದು ಕೇಂದ್ರ ಸರ್ಕಾರ ಸಾವಿನ ಲೆಕ್ಕದಲ್ಲಿ ಸುಳ್ಳು ಮಾಹಿತಿ ನೀಡಿದೆ. ಆ ಮೂಲಕ ಜಗತ್ತಿನ ಕಣ್ಣಿಗೆ ಮಣ್ಣೆರಚಿದೆ. ಆದರೆ ಈಗ ಕೇಂದ್ರದ ಬಂಡವಾಳ ಬಯಲಾಗಿದೆ ಎಂದಿದ್ದಾರೆ.
ಕೊರೊನಾ ಎರಡನೇ ಅವಧಿಯಲ್ಲಿ ಭಾರತದಲ್ಲಿ ಆಕ್ಸಿಜನ್ ಅಲಭ್ಯತೆಯಿಂದಾಗಿ ಸಾಲು ಸಾಲು ಜೀವಗಳು ಹೋಗಿದ್ದವು. ಗಂಗೆಯಲ್ಲಿ ಶವಗಳು ತೇಲುತ್ತಿದ್ದವು. ಜನ ಇಷ್ಟೊಂದು ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದರೂ, ಭಾರತ ಕೊರೊನಾ ಗೆದ್ದಿದೆ ಎಂದು ಪ್ರಧಾನಿಯವರು ಬಿಟ್ಟಿ ಪ್ರಚಾರ ಪಡೆದುಕೊಂಡರು. ಆದರೆ ಸತ್ಯ ವಿಶ್ವ ಆರೋಗ್ಯ ಸಂಸ್ಥೆಯಿಂದ ಸತ್ಯದರ್ಶನವಾಗಿದ್ದು, ಕೇಂದ್ರದ ಸುಳ್ಳಿನ ಮುಖವಾಡ ಕಳಚಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರ ಪ್ರಚಾರದ ಹುಚ್ಚು, ಕೇಂದ್ರದ ನಿರ್ಲಕ್ಷ್ಯದಿಂದಾಗಿ ಇಷ್ಟು ಜನ ಜೀವ ಕಳೆದುಕೊಳ್ಳುವಂತಾಗಿದೆ. ಸಾವನ್ನಪ್ಪಿದವರ ಮನೆಯವರ ಶಾಪ ಮೋದಿ ಸರ್ಕಾರಕ್ಕೆ ತಟ್ಟದೇ ಇರದು. ಈ ಎಲ್ಲಾ ಸಾವುಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದವರು ಕಿಡಿ ಕಾರಿದ್ದಾರೆ.