ಚಿಕ್ಕಮಗಳೂರು, ಮೇ 06 (DaijiworldNews/DB): ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಚಾರ್ಜ್ ತೆಗೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ಗೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಏಕವಚನದಲ್ಲಿ ಆವಾಜ್ ಹಾಕಿದ ಘಟನೆ ನಡೆದಿದೆ. ಆವಾಜ್ ಹಾಕಿರುವ ಆಡಿಯೋ ವೈರಲ್ ಆಗಿದ್ದು, ಶಾಸಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಠಾಣೆಯ ಇನ್ಸ್ಪೆಕ್ಟರ್ ರವೀಶ್ ಅವರು ಹೊಸದಾಗಿ ಚಾರ್ಜ್ ತೆಗೆದುಕೊಂಡಿದ್ದರು. ಆದರೆ ದೂರವಾಣಿ ಕರೆಯಲ್ಲಿ ಇವರ ಜೊತೆ ಮಾತನಾಡಿದ ಶಾಸಕ ಎಂ.ಪಿ. ಕುಮಾರಸ್ವಾಮಿ ಏಕವಚನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ನ್ನು ನಿಂದಿಸಿದ್ದಾರೆ. ಎಲ್ಲಿದ್ದೀಯ, ನಿನಗೆ ಇಲ್ಲಿಗೆ ಬರಬೇಡ ಎಂದಿದ್ದೆ ತಾನೇ, ಮತ್ಯಾಕೆ ಬಂದಿದ್ದೀಯ. ಠಾಣೆಯಲ್ಲಿ ಇರಬೇಡ. ವಾಪಾಸ್ ಹೋಗೊಲೇ..ನಾನು ಹೇಳಿದನ್ನು ಸರಿಯಾಗಿ ಕೇಳಿಕೊ, ಬೇಕಾದ್ರೆ ರೆಕಾರ್ಡ್ ಮಾಡ್ಕೋ. ನಾಳೆಯೇ ನಿನ್ನ ಡೆಪ್ಟೇಶನ್ ಮಾಡಿಸುತ್ತೇನೆ, ವಾಪಾಸ್ ಬಂದ ರೀತಿಯಲ್ಲೇ ಹೋಗು ಎಂದು ಆವಾಜ್ ಹಾಕಿದ್ದಾರೆ. ಅಲ್ಲದೆ, ಇಲ್ಲಿಗೆ ಬರುವುದಕ್ಕೆ ಐಜಿಗೆ ಎಷ್ಟು ಲಂಚ ನೀಡಿದ್ದೀಯ? ಐಜಿ ಅಲ್ಲ, ಮೂಡಿಗೆರೆಯಲ್ಲಿ ಎಲ್ಲಾ ನಾನೇ, ನನ್ನನ್ನು ಕಾಣುವುದಕ್ಕೆ ಬಂದ್ರೆ ಒದ್ದು ಓಡಿಸುತ್ತೇನೆ ಎಂದು ಬೈದಿರುವ ಆಡಿಯೋ ಸದ್ಯ ವೈರಲ್ ಆಗಿದೆ.
ಈ ಹಿಂದೆಯೂ ಇದೇ ರೀತಿಯ ಆವಾಜ್ ಹಾಕಿ ಸುದ್ದಿಯಲ್ಲಿದ್ದ ಎಂ.ಪಿ. ಕುಮಾರಸ್ವಾಮಿ ಈ ಬಾರಿಯೂ ಕೂಡಾ ದರ್ಪದಿಂದ ಮಾತನಾಡಿದ್ದಾರೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಆದರೆ ಈ ನಡುವೆ ಆವಾಜ್ ಹಾಕಿರುವುದನ್ನು ಸಮರ್ಥಿಸಿಕೊಂಡಿರುವ ಎಂ.ಪಿ. ಕುಮಾರಸ್ವಾಮಿ, ಆತ ಹೊಸ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಸೌಜನ್ಯಕ್ಕೂ ನನಗೆ ಮಾಹಿತಿ ನೀಡಿಲ್ಲ. ನನ್ನನ್ನು ಭೇಟಿಯೂ ಆಗಿಲ್ಲ. ಐಜಿ ಸೇರಿದಂತೆ ಎಲ್ಲರಿಗೂ ಲಂಚ ನೀಡಿ ಆತ ಬಂದಿದ್ದಾನೆ. ಭ್ರಷ್ಟ ಅಧಿಕಾರಿಗಳು ನನ್ನ ಕ್ಷೇತ್ರದಲ್ಲಿ ಇರಬಾರದು ಎಂಬ ಕಾರಣಕ್ಕೆ ನಾನು ಆವಾಜ್ ಹಾಕಿದ್ದೇನೆ. ನಾನು ಮಾತನಾಡಿದ್ದನ್ನು ಆತ ರೆಕಾರ್ಡ್ ಮಾಡಿಕೊಂಡಿದ್ದು, ಆತನ ವಿರುದ್ದ ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದಿದ್ದಾರೆ.