ಕಲಬುರ್ಗಿ, ಮೇ 06 (DaijiworldNews/MS): ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದ ಸಂಬಂಧ ಸರ್ಕಾರ ತಳಮಟ್ಟದಿಂದಲೇ ತನಿಖೆ ನಡೆಸುತ್ತಿದ್ದು, ಇದಕ್ಕೆ ಕೈ ಹಾಕಿರುವರು ಇನ್ನೊಮ್ಮೆ ಮುಟ್ಟಿಕೊಳ್ಳಬೇಕು. ಯಾರೇ ಎಷ್ಟೋ ದೊಡ್ಡವರಿದ್ದರೂ ಸರ್ಕಾರ ಬಿಡುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ . ಆದರೆ ಕಾಂಗ್ರೆಸ್ನವರು ಸರಕಾರದಲ್ಲಿರುವ ಕೆಲ ಸಚಿವರ ತೇಜೋವಧೆ ಯತ್ನಿಸುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ಹಗರಣ ಮಾಡುವವರು ಭವಿಷ್ಯದಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಪ್ರಕರಣದಲ್ಲಿ ಬಹುತೇಕ ಸಿಲುಕಿದವರೇ ಕಾಂಗ್ರೆಸ್ ನವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣದಲ್ಲಿ 300 ಕೋಟಿ ಅಲ್ಲ 3000 ಕೋಟಿ ಆರೋಪ ಮಾಡಲಿ. ಮಾತಾಡಲು ಅವರಿಗೆ ವಾಕ್ ಸ್ವಾತಂತ್ರವಿದೆ. ದಾಖಲಾತಿ ಕೊಡಿ ಎಂದರೆ ಕಾಂಗ್ರೆಸ್ ಅವರು ಓಡಿಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ