ಬೆಂಗಳೂರು, ಮೇ 05 (DaijiworldNews/HR): ರಾಜ್ಯ ಸರ್ಕಾರವು ಇಂದು ಬಿಬಿಎಂಪಿಯ ಮುಖ್ಯ ಆಯುಕ್ತರಾಗಿದ್ದಂತ ಗೌರವ್ ಗುಪ್ತ ಸೇರಿದಂತೆ 17 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕುರಿತು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಬಿಬಿಎಂಪಿಯ ಮುಖ್ಯ ಆಯುಕ್ತರಾಗಿದ್ದಂತ ಗೌರವ್ ಗುಪ್ತ ಅವರನ್ನು ವರ್ಗಾವಣೆ ಮಾಡಿ, ಮೂಲ ಸೌಕರ್ಯಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ತುಷಾ ಗಿರಿ ನಾಥ್ ಅವರನ್ನು ವರ್ಗಾವಣೆ ಮಾಡಿ ಬಿಬಿಎಂಪಿಯ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಕೆ ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಐಎಎಸ್ ಅಧಿಕಾರಿ ವಿ ಪೊನ್ನುರಾಜ್ ಅವರನ್ನು, ಕೆಪಿಸಿಎಲ್ ನ ಎಂಡಿಯಾಗಿ ನೇಮಕ ಮಾಡಲಾಗಿದ್ದು, ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಮನೋಜ್ ಕುಮಾರ್ ಜೈನ್ ಅವರನ್ನು ಕಾರ್ಮಿಕ ಇಲಾಖೆಯ ಸೆಕ್ರೇಟರಿಯನ್ನಾಗಿ ನೇಮಕ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಜೇಂದ್ರ ಕೆ ಅವರನ್ನು ವರ್ಗಾವಣೆ ಮಾಡಿದ್ದು, ಕರ್ನಾಟಕ ಲೋಕಸೇವಾ ಆಯೋಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಬೆಳಗಾವಿ ಡಿಸಿಯಾಗಿದ್ದಂತ ಎಂ.ಜಿ ಹಿರೇಮಠ್ ಅವರನ್ನು ವರ್ಗಾವಣೆ ಮಾಡಿ, KRIDL ಎಂಡಿಯಾಗಿ ನೇಮಕ ಮಾಡಲಾಗಿದೆ. ಧಾರವಾಡ ಜಿಲ್ಲಾಧಿಕಾರಿಯಾಗಿದ್ದಂತ ನಿತೀಶ್ ಪಾಟೀಲ್ ಅವರನ್ನು, ಬೆಳಗಾವಿ ಡಿಸಿಯಾಗಿ ನೇಮಕ ಮಾಡಲಾಗಿದೆ.
ಶ್ರೀಮತಿ ಖುಷ್ಬು ಸಿ ಚೌಧರ್ ಅವರು ಹುದ್ದೆಯ ನಿರೀಕ್ಷೆಯಲ್ಲಿದ್ದರು. ಅವರನ್ನು ನವದೆಹಲಿಯ ಕಂದಾಯ ಭವನದ ಡೆಪ್ಯುಟಿ ರೆಸಿಡೆಂಟ್ ಕಮೀಷನರ್ ಆಗಿ ನೇಮಕ ಮಾಡಲಾಗಿದೆ. ಈ ಸ್ಥಾನದಲ್ಲಿದ್ದಂತ ಪ್ರಸನ್ನ ಹೆಚ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕಲಬುರ್ಗಿ ಸಿಇಓ ಡಾ.ದಿಲೀಶ್ ಶಶಿ ಅವರನ್ನು, ಡಿಪಿಎಆರ್ ನ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಎಸ್ ಭಾರತ್ ಅವರನ್ನು NWKRTCಯ ಎಂಡಿಯಾಗಿ ನೇಮಕ ಮಾಡಲಾಗಿದೆ.
ಉಡುಪಿ ಜಿಲ್ಲಾಪಂಚಾಯ್ತಿ ಸಿಇಓ ಆಗಿದ್ದಂತ ಡಾ.ನವೀನ್ ಭಟ್ ವೈ ಅವರನ್ನು, ಕೆ ಎಸ್ ಆರ್ ಟಿ ಸಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಬಾಗಲಕೋಟೆ ಜಿಲ್ಲಾಪಂಚಾಯ್ತಿ ಸಿಇಓ ಟಿ ಭೂಬಾಲನ್ ಅವರನ್ನು ಭಾಗಲಕೋಟೆ ಡಿಸಿಯನ್ನಾಗಿ ನೇಮಕ ಮಾಡಲಾಗಿದೆ.
ಇನ್ನು ಎಂ ಶಿಲ್ಪ ಅವರನ್ನು ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಎಂಡಿಯಾಗಿ ನೇಮಕ ಮಾಡಲಾಗಿದ್ದು,ಕರ್ನಾಟಕ ಭವನದ ಡಿಆರ್ಸಿ ಆಗಿದ್ದ ಹೆಚ್ ಪ್ರಸನ್ನ ಅವರನ್ನು, ಉಡುಪಿ ಜಿಲ್ಲಾಪಂಚಾಯ್ತಿಯ ಸಿಇಓ ಆಗಿ ನೇಮಕ ಮಾಡಲಾಗಿದೆ.
ಕೊಳ್ಳೇಗಾಲದ ಜಿಲ್ಲಾಧಿಕಾರಿಯಾಗಿದ್ದ ಡಾ.ಗಿರೀಶ್ ದಿಲೀಪ್ ಬಾದೊಲೆ ಅವರನ್ನು ಕಲಬುರ್ಗಿ ಜಿಲ್ಲಾ ಪಂಚಾಯ್ತಿಯ ಸಿಇಓ ಆಗಿ ನೇಮಕ ಮಾಡಲಾಗಿದೆ.