ನವದೆಹಲಿ, ಮೇ 05 (DaijiworldNews/DB): ದೆಹಲಿಯಲ್ಲಿ ಅಕ್ಟೋಬರ್ 1ರಿಂದ ವಿದ್ಯುತ್ ಸಬ್ಸಿಡಿಯನ್ನು ಅಗತ್ಯವಿರುವವರಿಗೆ ಮಾತ್ರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಘೋಷಿಸಿದ್ದಾರೆ.
ಜನರಿಗೆ ಆಯ್ಕೆ ನೀಡಲಾಗುವುದು. ಯಾರಿಗೆ ಬೇಕು ಅವರಿಗೆ ಸಬ್ಸಿಡಿ ನೀಡಲಾಗುವುದು. ಈಗಾಗಲೇ ಎಎಪಿ ಸರ್ಕಾರವು ದೆಹಲಿಯಲ್ಲಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತದೆ ಎಂದರು.
ರಾಷ್ಟ್ರ ರಾಜಧಾನಿಯಲ್ಲಿ ಈಗಾಗಲೇ ಕಲ್ಲಿದ್ದಲು ದಾಸ್ತಾನು ತೀರಾ ಕಡಿಮೆ ಇರುವುದರಿಂದ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಈ ನಡುವೆ ರಾಜ್ಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಅವರಿಗೆ ಪತ್ರ ಬರೆದು, ದೆಹಲಿಯಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ, ನಿರಂತರ ವಿದ್ಯುತ್ ಪೂರೈಕೆಗೆ ಸಾಕಷ್ಟು ಕಲ್ಲಿದ್ದಲು ಲಭ್ಯತೆ ಖಚಿತಪಡಿಸಿಕೊಳ್ಳಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಆದರೆ, ದೆಹಲಿ ಸರ್ಕಾರದ ಈ ಕ್ರಮವನ್ನು ಅಲ್ಲಗಳೆದಿರುವ ಆರ್.ಕೆ. ಸಿಂಗ್, ವಿವಿಧ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯತೆ ಇದೆ. ದೆಹಲಿ ಸರ್ಕಾರ ಜನರನ್ನು ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆಯುತ್ತಿದೆ ಎಂದಿದ್ದಾರೆ.