ಕಾಶಿಪುರ, ಮೇ 05 (DaijiworldNews/DB): ತಂದೆಯ ಕೊನೆಯ ಆಸೆಯಂತೆ ಸಹೋದರಿಯರಿಬ್ಬರು ಇಲ್ಲಿನ ಈದ್ಗಾ ಮಸೀದಿ ಮೈದಾನಕ್ಕೆ 1.5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಭೂಮಿಯನ್ನು ದಾನ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬ್ರಜನಂದನ್ ಪ್ರಸಾದ್ ರಸ್ತೋಗಿ ಅವರು ತಮ್ಮ ಕೃಷಿ ಭೂಮಿಯಲ್ಲಿ 0.80 ಎಕರೆಗಳನ್ನು ಈದ್ಗಾ ಮಸೀದಿ ಮೈದಾನ ವಿಸ್ತರಣೆಗಾಗಿ ದಾನ ಮಾಡುವುದಾಗಿ ಸಂಬಂಧಿಕರಲ್ಲಿ ಹೇಳಿಕೊಂಡಿದ್ದರು. ಆದರೆ ಅವರು 2003ರಲ್ಲಿ ನಿಧನ ಹೊಂದಿದ್ದರು. ತಂದೆಯ ಆಸೆ ಮಕ್ಕಳಿಗೆ ತಿಳಿದಿರಲಿಲ್ಲ. ಆದರೆ ಎರಡು ದಶಕಗಳ ಬಳಿಕ ಸಂಬಂಧಿಕರು ಈ ವಿಚಾರವನ್ನು ಬ್ರಜನಂದನ್ ಅವರ ಇಬ್ಬರು ಹೆಣ್ಣು ಮಕ್ಕಳ ಗಮನಕ್ಕೆ ತಂದಿದ್ದಾರೆ.
ಇವರಿಬ್ಬರು ದೆಹಲಿ ಮತ್ತು ಮೀರತ್ನಲ್ಲಿ ವಾಸಿಸುತ್ತಿದ್ದಾರೆ. ತಂದೆಯ ಕೊನೆಯ ಆಸೆಯ ಬಗ್ಗೆ ತಿಳಿದುಕೊಂಡ ಸಹೋದರಿಯರಿಬ್ಬರು ತತ್ಕ್ಷಣ ಕಾಶಿಪುರದಲ್ಲಿರುವ ಸಹೋದರ ರಾಕೇಶ್ ರಸ್ತೋಗಿಯವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಸಹೋದರನೂ ಇಬ್ಬರು ಸಹೋದರಿಯರ ಮಾತಿಗೆ ಒಪ್ಪಿಗೆ ಸೂಚಿಸಿದ್ದಾನೆ. ಹೀಗಾಗಿ 1.5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಭೂಮಿಯನ್ನು ಸಹೋದರಿಯರಿಬ್ಬರು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದಲ್ಲಿ ಇರುವ ಈದ್ಗಾಕ್ಕೆ ದಾನ ಮಾಡಿದ್ದಾರೆ.
ತಂದೆಯ ಆಸೆಯನ್ನು ಗೌರವಿಸಿ ಅದರಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ಸಹೋದರಿಯರು ಅವರ ಕೊನೆಯ ಆಸೆ ನೆರವೇರಿಸಿ ತಂದೆಯ ಆತ್ಮಕ್ಕೆ ಶಾಂತಿ ನೀಡುವ ಕೆಲಸ ಮಾಡಿದ್ದಾರೆ ಎಂದು ರಾಕೇಶ್ ರಸ್ತೋಗಿ ಪ್ರತಿಕ್ರಿಯಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.