ಬೆಂಗಳೂರು, ಮೇ 05 (DaijiworldNews/DB): ಕಾಂಗ್ರೆಸ್ ಸೋಲಿನ ಭೀತಿಯಿಂದ ಬಿಜೆಪಿ ವಿರುದ್ದ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ಗೆ ರಾಜ್ಯದಲ್ಲಿಯೂ ಸೋಲು ಭೀತಿ ಉಂಟಾಗಿದೆ. ಹಾಗಾಗಿ ಹತಾಶೆ ಭಾವನೆ ಹೆಚ್ಚಾಗಿದೆ. ರಾಜ್ಯದಲ್ಲಿ ಸರ್ಕಾರ ಮಾಡಿರುವ ಅಭಿವೃದ್ದಿಯನ್ನು ಮರೆ ಮಾಚಿ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ಆ ಪಕ್ಷ ನಿರತವಾಗಿದೆ ಎಂದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಈ ರೀತಿಯ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗ ಸರ್ಕಾರದ ಹೆಸರು ಹಾಳು ಮಾಡುವುದೇ ಅವರ ಮುಖ್ಯ ಉದ್ದೇಶ ಎಂದವರು ಇದೇ ವೇಳೆ ಆಪಾದಿಸಿದರು.
ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಸರ್ಕಾರದ ಪಾತ್ರ ಇಲ್ಲ. ಅಲ್ಲದೆ, ಅಕ್ರಮ ಎಸಗಿದವರನ್ನು ಈಗಾಗಲೇ ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಸುಮ್ಮನೆ ಅಪಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದೆ. ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ಅವರು ತಿಳಿಸಿದರು.