ಬೆಂಗಳೂರು, ಮೇ 05 (DaijiworldNews/DB): ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಹೆಸರುವಾಸಿ. ಬಿಜೆಪಿಯವರ ರಾಜೀನಾಮೆ ಕೇಳುವ ನೈತಿಕತೆ ಅವರಿಗಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದಂತ ಅವರು, ಡಿ.ಕೆ. ಶಿವಕುಮಾರ್ ಸ್ವತಃ ಹಗರಣದಲ್ಲಿ ಜೈಲಿಗೆ ಹೋಗಿದ್ದಾರೆ. ಆದರೆ ಈಶ್ವರಪ್ಪ ಅವರು ಆರೋಪ ಕೇಳಿ ಬಂದ ತತ್ಕ್ಷಣ ರಾಜೀನಾಮೆ ನೀಡಿದ್ದಾರೆ. ಸಂಸದ ಸುರೇಶ್ ಅವರು ಸಚಿವ ಅಶ್ವತ್ಥ ನಾರಾಯಣ ಅವರ ಎದುರೇ ಗೂಂಡಾ ರೀತಿಯಲ್ಲಿ ವರ್ತಿಸಿದ್ದನ್ನು ಜನರು ನೋಡಿದ್ದಾರೆ. ಈಗ ಅನ್ಯಾಯವಾಗಿ ಅಶ್ವತ್ಥ ನಾರಾಯಣ ಅವರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಯಾವೊಬ್ಬ ನಾಯಕನ ರಾಜೀನಾಮೆ ಕೇಳುವುದಕ್ಕೂ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದರು.
ಕೆಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಮಾಡುವುದಾಗಿ ಹೇಳಿ 25 ಲಕ್ಷ ರೂ.ಗಳನ್ನು ಪಡೆದುಕೊಂಡು ಹಣ ಹಿಂತಿರುಗಿಸದೇ ಗೂಂಡಾಗಿರಿ ಮಾಡಿಲ್ಲವೇ ಎಂಬುದಕ್ಕೆ ಅವರು ಉತ್ತರಿಸಲಿ. ಆ ಕುಟುಂಬದವರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆಯಾಗಬೇಕು. ಅಲ್ಲದೆ, ಸಂಸದ ಸ್ಥಾನಕ್ಕೆ ಡಿ.ಕೆ. ಸುರೇಶ್ ರಾಜೀನಾಮೆ ನೀಡಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.
ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಜಟಾಪಟಿ ನಡೆಯುತ್ತಿದೆ. ಆದರೆ ಸಿದ್ದರಾಮಯ್ಯ ಅವರು ಡಿಕೆಶಿಯಿಂದ ದೂರ ಇದ್ದಷ್ಟು ಅವರಿಗೇ ಒಳ್ಳೆಯದು ಎಂದವರು ಇದೇ ವೇಳೆ ಸಲಹೆ ಮಾಡಿದರು.
ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ನಿರ್ಧರಿಸುತ್ತದೆ. ಯತ್ನಾಳ್ ಅವರ ಹೇಳಿಕೆ ಯಾವ ಆಧಾರದಲ್ಲಿದೆ ಎಂದು ಗೊತ್ತಿಲ್ಲ. ಅವರು ಕೇಂದ್ರದಲ್ಲಿ ಸಚಿವರಾಗಿದ್ದವರು. ಅವರ ಹೇಳಿಕೆ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಈ ವೇಳೆ ಪ್ರತಿಕ್ರಿಯಿಸಿದರು.