ನವದೆಹಲಿ, ಮೇ 05 (DaijiworldNews/HR): ಸದ್ಯಕ್ಕೆ ಹೊಸ ಪಕ್ಷ ಸ್ಥಾಪಿಸುವುದಿಲ್ಲ ಎಂದಿರುವ ಪ್ರಶಾಂತ್ ಕಿಶೋರ್, ಬಿಹಾರದ ಸುಧಾರಣೆಗಾಗಿ ಪಶ್ಚಿಮ ಚಂಪಾರಣ್ ಗಾಂಧಿ ಆಶ್ರಮದಿಂದ ಅಕ್ಟೋಬರ್ 2ರಂದು 3,000 ಕಿ.ಮೀ. ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಮಾತನಡಿರುವ ಅವರು, ಬಿಹಾರದ ಬಹುತೇಕ ಭಾಗದಲ್ಲಿ ಯಾತ್ರೆ ನಡೆಸುವ ಗುರಿ ನನ್ನದಾಗಿದ್ದು, ಜನರನ್ನು ಕಚೇರಿಗಳಲ್ಲಿ ಹಾಗೂ ಅವರ ಮನೆಗಳಲ್ಲಿ ನಾವು ಭೇಟಿ ಮಾಡಿ, ಅವರ ಸಮಸ್ಯೆಗಳು ಹಾಗೂ ನಿರೀಕ್ಷೆಗಳನ್ನು ತಿಳಿಯುತ್ತೇವೆ ಎಂದರು.
ಇನ್ನು ಬಿಹಾರದ ಸಮಸ್ಯೆಗಳ ಬಗ್ಗೆ ಅರಿವಿರುವ ಸುಮಾರು 17,000ದಿಂದ 18,000 ಜನರೊಂದಿಗೆ ನಾನು ಮಾತನಾಡಿ, ಅವರನ್ನು ಒಂದೇ ವೇದಿಕೆಯಡಿ ತರಲು ಪ್ರಯತ್ನಿಸುತ್ತೇನೆ. ಆ ಪ್ರಕ್ರಿಯೆಯನ್ನು ನಾನು ಆಗಸ್ಟ್ನಿಂದ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಬೇಕಿದೆ ಎಂದಿದ್ದಾರೆ.
ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಅವರ 30 ವರ್ಷಗಳ ಆಡಳಿತದ ಬಳಿಕ ಬಿಹಾರವು ಭಾರತದಲ್ಲಿ ಅತ್ಯಂತ ಹಿಂದುಳಿದ ರಾಜ್ಯವಾಗಿದ್ದು, ಬಿಹಾರವು ಅಭಿವೃದ್ಧಿ ಆಗಬೇಕಾದರೆ, ಕಳೆದ 10-15 ವರ್ಷಗಳಿಂದ ಸಾಗುತ್ತಿರುವ ಹಾದಿಯಲ್ಲಿ ಸಾಧ್ಯವಾಗುವುದಿಲ್ಲ. ಅದಕ್ಕೆ ಹೊಸ ಪಥದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.