ಬೆಂಗಳೂರು, ಮೇ 05(DaijiworldNews/MS): ಸಭಾಪತಿ ಬಸವರಾಜ ಹೊರಟ್ಟಿಯವರು ಪಕ್ಷಾಂತರ ಕಾಯ್ದೆಯ ಉಲ್ಲಂಘನೆ ಮಾಡಿರುವುದಲ್ಲದೆ , ಮೇಲ್ಮನೆ ಗೌರವ ಕಾಪಾಡಿಲ್ಲ ಸಂವಿಧಾನದ ಪೀಠದಲ್ಲಿದ್ದು ಸಂವಿಧಾನಕ್ಕೆ ಅಪಚಾರ ಮಾಡಿ ಮಹಾ ಅಪರಾಧ ಎಸಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಗುರುವಾರ ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭಾಪತಿಯಾಗಿ ಹೊರಟ್ಟಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸಭಾಪತಿಯಾಗಿ ಈರೀತಿ ಮಾಡುತ್ತಾರೆ ಎಂದು ಅವರಿಂದ ಈ ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ತಕ್ಷಣವೇ ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ಪಕ್ಷ ಸಿದ್ದಾಂತಗಳನ್ನ ಒಪ್ಪಿ ಯಾರು ಬೇಕಾದರೂ ಯಾವುದೇ ಪಕ್ಷವನ್ನ ಸೇರಬಹುದು, ಆದರೆ ಸಂವಿಧಾನ ಪೀಠದಲ್ಲಿರುವವರು ನಡೆದುಕೊಳ್ಳುವ ರೀತಿ ಇದು ಸರಿಯಿಲ್ಲ. ಕೇಂದ್ರದ ಗೃಹ ಸಚಿವರೇ ಬಂದು ಹೊರಟ್ಟಿಯವರನ್ನು ಭೇಟಿ ಮಾಡಬೇಕಿತ್ತು. ಇದು ಸಭಾಪತಿಗೆ ಇರುವ ಸಂವಿಧಾನಬದ್ಧ ಅಧಿಕಾರ ಆಗಿದೆ. ಆದರೆ ಹೊರಟ್ಟಿಯವರು ತಾವೇ ಹೋಗಿ ಅಮಿತ್ ಶಾ ಭೇಟಿ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ
ಸಭಾಪತಿಗಳ ಹುದ್ದೆ ಪಕ್ಷಾತೀತವಾದದ್ದು, ಆದರೆ ಹೊರಟ್ಟಿಯವರು ಬಿಜೆಪಿ ಸೇರ್ಪಡೆ ಆಗುತ್ತೇನೆ ಎಂದು ಹೇಳುವುದು ಪೀಠಕ್ಕೆ ಮಾಡಿದ ದ್ರೋಹ ಹೊರಟ್ಟಿಯವರು ಯಾವುದೇ ಪಕ್ಷ ಸೇರಲಿ, ನಮಗೆ ಆಕ್ಷೇಪ ಇಲ್ಲ. ಆದ್ರೆ ಅವರು ತಮ್ಮ ರಾಜೀನಾಮೆ ಕೊಡೋ ಮುನ್ನ ಈ ನಡೆ ಸರಿಯಲ್ಲ. ಬಿಜೆಪಿಗೆ ಸೇರಿ ಹೊರಟ್ಟಿಯವರು ಹರಕೆಯ ಕುರಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.