ಬೆಂಗಳೂರು, ಮೇ 05 (DaijiworldNews/DB): ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಟಾರ್ಗೆಟ್ ಸಿದ್ದರಾಮಯ್ಯ. 2023ಕ್ಕೆಅವರನ್ನು ಪಕ್ಷದಿಂದ ಅಮಾನತು ಮಾಡುವುದು ನಿಶ್ಚಿತ ಎಂದು ತೋಟಗಾರಿಕೆ ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ವಜಾ ಮಾಡಲು ಈಗಾಗಲೇ ಭೂಮಿಕೆ ಸಿದ್ದವಾಗುತ್ತಿದೆ. 1994ರಲ್ಲಿ ಆಗಿದ್ದು 2023 ಡಿಸೆಂಬರ್ ನಲ್ಲಿ ಮರುಕಳಿಸಲಿದೆ. ರಾಮಕೃಷ್ಣ ಹೆಗಡೆ ಜಾಗದಲ್ಲಿ ಪ್ರಸ್ತುತ ಸಿದ್ದರಾಮಯ್ಯ ಇದ್ದಾರೆ. ಕಾಂಗ್ರೆಸ್ ಸಂಪೂರ್ಣ ಮುಳುಗಿ ಹೋಗಿದ್ದು, ಮುಂದೆ ಅಸ್ತಿತ್ವವೇ ಇಲ್ಲದಾಗಲಿದೆ ಎಂದರು.
ಬಿಜೆಪಿಗೆ 125 ಸ್ಥಾನ ಖಚಿತ ಎನ್ನುವುದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಾಡಿದ ಸರ್ವೆಗಳ ಮೂಲಕವೇ ಅವರಿಗೆ ಗೊತ್ತಾಗಿದೆ. ಹಾಗಾಗಿ ಸೋಲಿನ ಭೀತಿಯಿಂದ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುವುದರಲ್ಲಿ ಅವರು ನಿರತರಾಗಿದ್ದಾರೆ. ಜನವರಿ 3 ರಂದು ಕಾರ್ಯಕ್ರಮವೊಂದರಲ್ಲಿ ಅಶ್ವತ್ಥ ನಾರಾಯಣ ತೊಡೆ ತಟ್ಟಿದಾಗಲೇ ಅವರ ವಿರುದ್ಧ ಮಾತನಾಡಲು ಕಾಂಗ್ರೆಸ್ಸಿಗರು ಮುಹೂರ್ತ ನಿಗದಿ ಮಾಡಿದ್ದಾರೆ ಎಂದವರು ಇದೇ ವೇಳೆ ಆರೋಪಿಸಿದರು.
ಪಿಎಸ್ ಐ ನೇಮಕ ಅಕ್ರಮ ಪ್ರಕರಣದ ಬಗ್ಗೆ ಆಧಾರವಿಲ್ಲದೆ ನಿರಂತರವಾಗಿ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಸಿಎಂ ಆಗಿದ್ದ ಅನುಭವಿ ಸಿದ್ದರಾಮಯ್ಯ ಅವರೇ ದಾಖಲೆ ಆಮೇಲೆ ಕೊಡುತ್ತೇವೆ ಎಂದು ಆರೋಪ ಮಾಡುವುದು ಸರಿಯಲ್ಲ. ರಾಜಕೀಯಕ್ಕಾಗಿ ಆರೋಪಗಳನ್ನು ಮಾಡದೆ ದಾಖಲೆಯಿದ್ದಲ್ಲಿ ನೀಡಿ. ಅಶ್ವತ ನಾರಾಯಣ ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಈಗಾಗಲೇ ಪ್ರಕರಣ ವಿಚಾರಣಾ ಹಂತದಲ್ಲಿದ್ದು, ವಿಚಾರಣೆ ಮುಗಿದ ಬಳಿಕ ಸ್ಪಷ್ಟತೆ ಸಿಗಲಿದೆ. ಊಹಾಪೋಹದ ಆರೋಪಗಳು ಸಲ್ಲ ಎಂದವರು ತಿಳಿಸಿದರು.
ಕುಮಾರಸ್ವಾಮಿ ಅವರು ಯಾವ ಸಂದರ್ಭದಲ್ಲಿ, ಯಾರ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಾರೆ ಎಂಬುದು ಅವರಿಗೇ ಗೊತ್ತಾಗುವುದಿಲ್ಲ ಎಂದು ಅಶ್ವತ್ಥ ನಾರಾಯಣ ಅವರ ಬಗೆಗೆ ಎಚ್ಡಿಕೆ ಸಾಫ್ಟ್ ಕಾರ್ನರ್ ತೋರಿಸುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಸಂಸದೆ ಸುಮಲತಾ ಅವರನ್ನು ಪಕ್ಷಕ್ಕೆ ಕರೆತರುವ ಹೊಣೆಯನ್ನು ನನಗೆ ಪಕ್ಷ ನೀಡಿದ್ದಲ್ಲಿ ಖಂಡಿತಾ ಆ ಕೆಲಸ ಮಾಡುತ್ತೇನೆ ಎಂದರು.