ಜಾರ್ಖಂಡ್, ಮೇ 05 (DaijiworldNews/DB): ಆಸ್ಪತ್ರೆ ಸಿಬಂದಿ ನಿರ್ಲಕ್ಷ್ಯದಿಂದ ನವಜಾತ ಹೆಣ್ಣು ಶಿಶುವಿನ ಮೊಣಕಾಲು ಮತ್ತು ಕೈ ಕಾಲುಗಳನ್ನು ಇಲಿಗಳು ಕಚ್ಚಿ ಗಾಯಗೊಳಿಸಿದ ಘಟನೆ ಗಿರಿದಿಹ್ನ ಜಾರ್ಖಂಡ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಏಪ್ರಿಲ್ ೨೯ ರಂದು ಮಹಿಳೆಯೋರ್ವರು ಮಗುವಿಗೆ ಜನ್ಮ ನೀಡಿದ್ದರು. ಆದರೆ ಈ ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಮಾದರಿ ತಾಯಿ ಮತ್ತು ಮಕ್ಕಳ ಆರೋಗ್ಯ ವಾರ್ಡ್ನಲ್ಲಿ ಮಗುವನ್ನು ಇರಿಸಲಾಗಿತ್ತು. ತಾಯಿ ಮಗುವನ್ನು ನೋಡಲು ವಾರ್ಡ್ಗೆ ತೆರಳಿದ್ದ ವೇಳೆ ಇಲಿಗಳು ಮಗುವನ್ನು ಕಚ್ಚಿ ಗಾಯಗೊಳಿಸಿರುವುದು ಕಂಡು ಬಂದಿದೆ. ಮೇ 2 ರಂದು ಗಿರಿದಿಹ್ ಸದರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಶಿಶುವಿಗೆ ಕಾಮಾಲೆ ಸೋಂಕು ತಗುಲಿದ್ದು, ಬೇರೆ ಆಸ್ಪತ್ರೆಗೆ ದಾಖಲಿಸಿ ಎಂಬುದಾಗಿ ನರ್ಸ್ ಹೇಳಿದ್ದಳು. ಆದರೆ, ಆಸ್ಪತ್ರೆ ಸಿಬಂದಿ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಶಿಶುವಿನ ತಾಯಿ ಮಮತಾ ದೇವಿ ಆರೋಪಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಶಿಶುವನ್ನು ಬಳಿಕ ಧನ್ಬಾದ್ನ ಶಾಹಿದ್ ನಿರ್ಮಲ್ ಮಹತೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂದ ನಿರ್ಲಕ್ಷ್ಯದ ಆರೋಪದಲ್ಲಿ ಇಬ್ಬರು ಹೊರಗುತ್ತಿಗೆ ನೌಕರರ ಸೇವೆಯನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಕರ್ತವ್ಯದಲ್ಲಿದ್ದ ವೈದ್ಯರ ವಿರುದ್ದ ಜಾರ್ಖಂಡ್ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಗಿರಿದಿಹ್ ಜಿಲ್ಲಾಧಿಕಾರಿ ನಮನ್ ಪ್ರಿಯೇಶ್ ಲಾಕ್ರಾ ತಿಳಿಸಿದ್ದಾರೆ. ನವಜಾತ ಶಿಶುವಿದ್ದ ವಾರ್ಡ್ನ ಸ್ವೀಪರ್ನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.