ಬೆಂಗಳೂರು, ಮೇ 05 (DaijiworldNews/DB): ಏಳು ಲ್ಯಾಪ್ಟಾಪ್, ಏಳು ಮೊಬೈಲ್ ಮತ್ತು ಇತರ ವಸ್ತುಗಳಿದ್ದ ಬ್ಯಾಗ್ನ್ನು ಬಸ್ನಲ್ಲೇ ಬಿಟ್ಟು ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಗ್ನ್ನು ನಿರ್ವಾಹಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬೆಂಗಳೂರು- ವೇಲೂರು ಮಾರ್ಗದ ಕೆಎಸ್ಆರ್ಟಿಸಿ ಬಸ್ನಲ್ಲಿ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಗೊತ್ತಾಗಿದೆ. ವೇಲೂರು ಕಡೆಗೆ ಹೊರಟ ಬಸ್ಗೆ ( ಕೆಎ- 57 ಎಫ್- 985) ಲಾಲ್ಬಾಗ್ ಬಳಿ ಅನುಮಾನಾಸ್ಪದ ರೀತಿಯ ನಡೆಯೊಂದಿಗೆ ವ್ಯಕ್ತಿಯೋರ್ವ ಹತ್ತಿದ್ದ. ಈ ಕಾರಣಕ್ಕೆ ನಿರ್ವಾಹಕ ಬಿ.ಸಿ. ಮಂಜುನಾಥ್ ಆತನ ಬ್ಯಾಗ್ ತಪಾಸಣೆಗೆ ಮುಂದಾಗಿದ್ದಾರೆ. ಆದರೆ ಆತ ಅದಕ್ಕೆ ವಿರೋಧವೊಡ್ಡಿ ಬ್ಯಾಗ್ ತಪಾಸಣೆಗೆ ನೀಡಲಿಲ್ಲ. ಆದರೆ ಮುಂದೆ ಮಡಿವಾಳದ ಬಳಿ ವ್ಯಕ್ತಿ ಪ್ರಯಾಣಿಕರ ಮಧ್ಯೆ ನುಸುಳಿಕೊಂಡು ಬಸ್ ಇಳಿದು ಪರಾರಿಯಾಗಿದ್ದಾನೆ. ಆತ ತಂದಿದ್ದ ಬ್ಯಾಗ್ನ್ನು ಬಸ್ನಲ್ಲೇ ಬಿಟ್ಟು ಪರಾರಿಯಾಗಿದ್ದ. ಹೀಗಾಗಿ ನಿರ್ವಾಹಕ ತತ್ಕ್ಷಣ ಘಟಕ ವ್ಯವಸ್ಥಾಪಕರ (ಡಿಪೋ- 6) ಗಮನಕ್ಕೆ ತಂದಿದ್ದಾರೆ. ಬಳಿಕ ಅಲ್ಲಿಂದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿ ವಿಷಯ ತಿಳಿಸಿ, ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಠಾಣೆಯ ಇನ್ಸ್ಪೆಕ್ಟರ್ ವಿಭಾಗೀಯ ಕಚೇರಿಗೆ ಆಗಮಿಸಿದರು. ಈ ವೇಳೆ ನಿರ್ವಾಹಕ ಬ್ಯಾಗ್ನ್ನು ಪೊಲೀಸರಿಗೆ ಹಸ್ತಾಂತರಿಸಿದರು.
ಅನುಮಾನಾಸ್ಪದ ವ್ಯಕ್ತಿಯ ನಡೆಯನ್ನು ಪತ್ತೆ ಹಚ್ಚಿ ಸಮಯಪ್ರಜ್ಞೆ ಮೆರೆದ ಮಂಜುನಾಥ್ ಅವರಿಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅಭಿನಂದನಾ ಪತ್ರ ಪ್ರದಾನ ಮಾಡಿ ಮೆಚ್ಚುಗೆ ಸೂಚಿಸಿದರು.