ಬೆಂಗಳೂರು, ಮೇ 05(DaijiworldNews/MS): ಯುವತಿ ಮೇಲೆ ಆಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿ ನಾಗೇಶ್ ಬಾಬು ತನ್ನ ವೇಷ ಬದಲಾಯಿಸಿಕೊಂಡಿಸಿರಬಹುದೆನ್ನುವ ಅನುಮಾನ ಹೊಂದಿದ್ದು, ಹೀಗಾಗಿ ವಿವಿಧ ಚಹರೆ ಹೊಂದಿರುವ ಫೋಟೋಗಳನ್ನು ಬಿಡುಗಡೆ ಮಾಡಿ ಆತನ ಬಂಧನಕ್ಕಾಗಿ ಸಾರ್ವಜನಿಕರ ಸಹಾಯ ಕೇಳಿದ್ದಾರೆ.
ಏಪ್ರಿಲ್ 28ರಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿ ಮೇಲೆ ನಾಗೇಶ್ ಬಾಬು ಆಸಿಡ್ ದಾಳಿ ನಡೆಸಿದ್ದ. ಆದರೆ ಘಟನೆ ನಡೆದು ವಾರ ಕಳೆದರೂ ಆರೋಪಿ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸರು ಆರೋಪಿಯ ಸುಳಿವು ಸಿಕ್ಕರೆ ಮಾಹಿತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಇನ್ನೂ ಆಸಿಡ್ ದಾಳಿಗೆ ಒಳಗಾದ ಯುವತಿಗೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ನಾಗೇಶ್ ಬಾಬು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಗಾರ್ಮೆಂಟ್ಸ್ ನಡೆಸುತ್ತಿದ್ದನು. ಘಟನೆ ನಡೆದ ಹತ್ತು ದಿನಗಳ ಹಿಂದೆ ಅದನ್ನು ಮಾರಾಟ ಮಾಡಿದ್ದ. ಆರೋಪಿಯ ಬಂಧನಕ್ಕಾಗಿ 100ಕ್ಕೂ ಪೊಲೀಸರ ಏಳು ತಂಡಗಳನ್ನು ರಚನೆ ಮಾಡಲಾಗಿದೆ. ಘಟನೆ ಬಳಿಕ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡಿರುವ ಆರೋಪಿ ನಾಪತ್ತೆಯಾಗಿದ್ದಾನೆ. ಕೊನೆಯ ಬಾರಿ ಆರೋಪಿ ಟವರ್ ಲೊಕೇಶನ್ ಮೆಜಿಸ್ಟಿಕ್ ಬಳಿ ಪತ್ತೆಯಾಗಿದ್ದು, ಇಲ್ಲಿಂದಲೇ ಆಸಿಡ್ ನಾಗ ನಾಪತ್ತೆಯಾಗಿದ್ದಾನೆ.
ಹೀಗಾಗಿ ತಲೆ ಸಂಪೂರ್ಣವಾಗಿ ಬೋಳಿಸಿರುವ, ಗಡ್ಡ ಮೀಸೆ ಬಿಟ್ಟಿರುವ, ತಲೆ ಬೋಳಿಸಿ ಮೀಸೆ, ಗಡ್ಡ ಬಿಟ್ಟಿರುವ ಫೋಟೋಗಳನ್ನು ಬಿಡುಗಡೆಗೊಳಿಸಿದ್ದು ಆರೋಪಿ ಪತ್ತೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.