ಬೆಂಗಳೂರು, ಮೇ 04 (DaijiworldNews/SM): ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್ ನಿಂದಾಗಿ ಕಲಿಕಾ ವಿಚಾರದಲ್ಲಿ ರಾಜ್ಯದಲ್ಲಿ ಹಿನ್ನೆಡೆ ಅನುಭವಿಸಿದ್ದು, ಇದರ ಸುಧಾರಣೆಗೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅನಿವಾರ್ಯವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಈ ಕಾರಣದಿಂದಾಗಿ ಶಿಕ್ಷಣ ಇಲಾಖೆ ಮೇ 16ರಿಂದ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಕೊರೋನಾ ಕಾರಣದಿಂದಾಗಿ ಕುಸಿತವಾಗಿರುವ ಕಲಿಕಾ ಸಾಮಾರ್ಥ್ಯವನ್ನು ಸರಿದೂಗಿಸುವುದು ಅನಿವಾರ್ಯವಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಕೂಡ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಅವರನ್ನು ಚೇತರಿಸುವ ಅಗತ್ಯವಿದೆ. 2022-23ನೇ ಶೈಕ್ಷಣಿಕ ವರ್ಷವನ್ನು ಮೇ 16ರಿಂದಲೇ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಸಚಿವ ಮಾಹಿತಿ ನೀಡಿದ್ದಾರೆ.
ಕೊರೋನಾ ಆರಂಭಗೊಂಡ ವರ್ಷದಲ್ಲೂ ಶೈಕ್ಷಣಿಕ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಬಳಿಕದ ವರ್ಷ ಸಂಪೂರ್ಣ ಅವಧಿಯಲ್ಲಿ ಭೌತಿಕ ತರಗತಿಗಳೇ ನಡೆದಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅರ್ಧ ಅವಧಿ ಮಾತ್ರವೇ ತರಗತಿಗಳು ನಡೆದಿವೆ. ಈ ಎಲ್ಲಾ ವಿಚಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.