ಬೆಂಗಳೂರು, ಮೇ 04 (DaijiworldNews/MS): 'ಪ್ರಧಾನಿ ಮೋದಿಯವರು ಮಾಧ್ಯಮಗಳ ಮೈಕು ಕಂಡರೆ ಎಕೆ47 ಗನ್ ಕಂಡಂತೆ ಹೆದರಿ ಓಡುವುದೇಕೆ ಬಿಜೆಪಿ ನಾಯಕರೇ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ " ಗಂಗೆಯಲ್ಲಿ ಕೋವಿಡ್ ಶವ ತೇಲಿದಾಗ, ಚೀನಾ 20 ಯೋಧರ ಹತ್ಯೆ ಮಾಡಿದಾಗ, ಪುಲ್ವಾಮ ದಾಳಿಯಲ್ಲಿ 40 ಯೋಧರು ಮಡಿದಾಗ ಬಾರದ 'ಓಹ್ ಮೈ ಗಾಡ್' ಉದ್ಘಾರ ಮಾಧ್ಯಮಗಳ ಮೈಕ್ ಎದುರಾದಾಗ ಬರುತ್ತದೆ ಎಂದರೆ ಅದೆಷ್ಟು ಗಾಬರಿಯಾಗಿರಬಹುದು ಎಂದು ಕುಹಕವಾಡಿದೆ.
ರಾಹುಲ್ ಗಾಂಧಿಯವರು ಆಹ್ವಾನದ ಮೇರೆಗೆ ಸ್ನೇಹಿತರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರೇ ಹೊರತು ಆಹ್ವಾನವಿಲ್ಲದಿದ್ದರೂ ಪಾಕಿಸ್ತಾನದ ಬಿರಿಯಾನಿ ತಿನ್ನಲು ಹೋಗಿರಲಿಲ್ಲ! ಪುಲ್ವಾಮ ದಾಳಿಯ ಸಂಗತಿ ತಿಳಿದರೂ ನಿರ್ಲಕ್ಷಿಸಿ ಶೂಟಿಂಗ್ ನಲ್ಲಿ ನಿರತರಾಗಿದ್ದ ತಮ್ಮ ನಾಯಕನಿಗೆ ಬಿಜೆಪಿಗರು ಮೊದಲು ಬುದ್ದಿ ಹೇಳಿಕೊಳ್ಳಲಿ ಎಂದು ತಿರುಗೇಟು ನೀಡಿದೆ
ರಾಹುಲ್ ಗಾಂಧಿಯವರು ಮದುವೆ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು ಜಗತ್ತಿನ ಅತಿ ದೊಡ್ಡ ಪ್ರಮಾದ ಎನ್ನುತ್ತಿರುವ ಬಿಜೆಪಿ ಉತ್ತರಿಸಲಿ, ಬಿಜೆಪಿ ನಾಯಕರಾದ ಪ್ರಕಾಶ್ ಜಾವ್ಡೇಕರ್ ಅವರು ಇದೇನು ಗೋಮೂತ್ರ ಪ್ರೋಕ್ಷಣೆ ಮಾಡುತ್ತಿರುವುದೇ ಅಥವಾ ಪವಿತ್ರ ಗಂಗಾಜಲವನ್ನು ಬಾಟಲಿಯಲ್ಲಿ ತುಂಬಿಕೊಂಡು ಸಿಂಪಡಿಸುತ್ತಿರುವುದೇ ಎಂದು ವ್ಯಂಗ್ಯವಾಡಿದೆ.