ಬೆಂಗಳೂರು, ಮೇ 04 (DaijiworldNews/MS): ಸಚಿವ ಅಶ್ವತ್ಥನಾರಾಯಣ ಕರ್ನಾಟಕ ಕಂಡಂತಹ ಅತ್ಯಂತ ಭ್ರಷ್ಟ ರಾಜಕಾರಣಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ನಾನು ಬ್ರಾಹ್ಮಣನ ಥರ ಇದ್ದೇನೆ, ಶುದ್ಧ ರಾಜಕಾರಣಿ ಎಂದು ಹೇಳಿಕೊಂಡು ಓಡಾಡುತ್ತಿರುವ ಸಚಿವ ಅಶ್ವತ್ಥನಾರಾಯಣ ಅತ್ಯಂತ ಭ್ರಷ್ಟ ರಾಜಕಾರಣಿ. ಪಿಎಸ್ಐ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದ ವ್ಯಕ್ತಿಯೊಬ್ಬರಿಗೆ ಪೊಲೀಸರು ವಿಚಾರಣೆಗೆ ನೋಟಿಸ್ ನೀಡಿದ್ದರು. ಆದರೆ ಸಚಿವರ ಸಂಬಂಧಿ ಹೇಳಿದ ನಂತರ ವಿಚಾರಣೆ ಮಾಡದೇ ಕಳುಹಿಸಿದ್ದಾರೆ. ಇದರ ಅರ್ಥ ಏನು?' ಪ್ರಕರಣದಲ್ಲಿ ಸ್ವತಃ ಸಚಿವರು ಹಾಗೂ ಸಚಿವರ ಸಹೋದರ ಭಾಗಿಯಾಗಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಈ ನಡುವೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದೂ ಈ ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಕೂಡ ಭಾಗಿಯಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬುದಾಗಿ ವಕೀಲರ ನಿಯೋಗವೊಂದು, ಸಿಐಡಿಗೆ ದೂರು ನೀಡಿದೆ ಎಂದು ವರದಿಯಾಗಿದೆ