ಬೆಂಗಳೂರು, ಮೇ 04 (DaijiworldNews/MS): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರೂ.600 ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ಆರೋಪಿಸಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್, 40% ಬಿಜೆಪಿಯ ಹಗರಣಗಳ ಸಾಲಿಗೆ ಮತ್ತೊಂದು ಅಕ್ರಮ ಸೇರ್ಪಡೆಯಾಗಿದೆ.ರಮೇಶ್ ಜಾರಕಿಹೊಳಿಯವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪೆನಿ ಹೆಸರಲ್ಲಿ ನಡೆಯುತ್ತಿರುವ 600 ಕೋಟಿ ವಂಚನೆಗೆ ಇಡೀ ಸರ್ಕಾರವೇ ಬೆಂಬಲವಾಗಿ ನಿಂತಿದೆ. ಅವರ ಸಾಲವನ್ನು NPA ಎಂದು ಪರಿಗಣಿಸುವಲ್ಲಿ ರಾಜ್ಯ ಸರ್ಕಾರ ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಸಹಬಾಗಿತ್ವವೂ ಇದೆ ಎಂದು ಆರೋಪಿಸಿದೆ.
ಚೆಕ್ ಆಯ್ತು, RTGS ಆಯ್ತು, ಕಮಿಷನ್ ಆಯ್ತು, ಈಗ ಭ್ರಷ್ಟಾಚಾರಕ್ಕೆ ಬಿಜೆಪಿ ಕಂಡುಕೊಂಡ ಹೊಸ ಮಾರ್ಗ "ಉದ್ದೇಶಪೂರ್ವಕ ದಿವಾಳಿ ಘೋಷಣೆ"ರಮೇಶ್ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹೆಸರಲ್ಲಿ 600 ಕೋಟಿ ಮೊತ್ತವನ್ನು ನುಂಗಿ ನೀರು ಕುಡಿಯಲು ಮುಂದಾಗಿದ್ದಾರೆ. ಸಹಕಾರ ಬ್ಯಾಂಕ್ಗಳ ಈ ನಷ್ಟಕ್ಕೆ ಹೊಣೆ ಯಾರು ಸಹಕಾರ ಸಚಿವರೇ? ಎಂದು ಪ್ರಶ್ನಿಸಿದೆ.
ಇದೇ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ "ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ನಡೆಸುತ್ತಿರುವ ಜಾರಕಿಹೊಳಿ ಅವರು 15 ಅಪೆಕ್ಸ್ ಬ್ಯಾಂಕ್ಗಳಿಂದ 366 ಕೋಟಿ ರೂ., ಯೂನಿಯನ್ ಬ್ಯಾಂಕ್ ಮತ್ತು ಹರಿಯನ್ ಕೋಆಪರೇಟಿವ್ ಸೊಸೈಟಿಯಿಂದ ತಲಾ 20 ಕೋಟಿ ರೂ.ಸಾಲ ಪಡೆದುಕೊಂದಿದ್ದಾರೆ. ಸಾಲ ಪಡೆದಿರುವ ಅವರು, ಒಂದು ಪೈಸೆ ಸಾಲವನ್ನು ಮರುಪಾವತಿ ಮಾಡಿಲ್ಲ. ಏಪ್ರಿಲ್ 2017 ರಲ್ಲಿ ಕಂಪನಿಯನ್ನು ಅನುತ್ಪಾದಕ ಆಸ್ತಿ (NPA) ಎಂದು ಘೋಷಿಸಲಾಯಿತು. ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನೋಟಿಸ್ ಜಾರಿ ಮಾಡಲಾಗಿತ್ತು, ಆದರೆ ಜಾರಕಿಹೊಳಿ ಧಾರವಾಡ ನ್ಯಾಯಾಲಯದ ಮೊರೆ ಹೋಗಿದ್ದರು. 2019 ರಲ್ಲಿ ಮಧ್ಯಂತರ ಆದೇಶವನ್ನು ನೀಡುವಾಗ ಸಾಲದ ಮೊತ್ತದ ಶೇಕಡಾ 50 ರಷ್ಟು ಮೊತ್ತವನ್ನು ಆರು ವಾರಗಳಲ್ಲಿ ಪಾವತಿಸಲು ನ್ಯಾಯಾಲಯವು ಅವರಿಗೆ ಸೂಚಿಸಿತ್ತು" ಎಂದು ಹೇಳಿದ್ದಾರೆ.