ಮುಂಬಯಿ, ಮೇ 04 (DaijiworldNews/HR): ಉದ್ಧವ್ ಠಾಕ್ರೆ ಮನೆ ಮುಂಭಾಗದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಸವಾಲು ಹಾಕಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಹಾರಾಷ್ಟ್ರದ ಸಂಸದೆ ನವ್ನೀತ್ ರಾಣಾ ಹಾಗೂ ಪತಿ, ಪಕ್ಷೇತರ ಶಾಸಕ ರವಿ ರಾಣಾಗೆ ಮುಂಬಯಿ ವಿಶೇಷ ಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ.
ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಮಾತೋಶ್ರೀ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಸವಾಲು ಹಾಕಿ, ಕೋಮು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ನವ್ ನೀತ್ ಹಾಗೂ ರವಿ ರಾಣಾ ಅವರನ್ನು ಏಪ್ರಿಲ್ 23ರಂದು ಪೊಲೀಸರು ಬಂಧಿಸಿದ್ದರು.
ಇನ್ನು ಮುಂಬಯಿ ಕೋರ್ಟ್ ಸಂಸದೆ ನವ್ನೀತ್ ರಾಣಾ ಹಾಗೂ ರವಿ ರಾಣಾಗೆ ಮೇ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಮತ್ತೊಂದೆಡೆ ಜಾಮೀನು ನೀಡುವಂತೆ ಕೋರಿ ರಾಣಾ ದಂಪತಿ ವಿಶೇಷ ಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಸಿದ ಕೋರ್ಟ್, ಒಂದು ವೇಳೆ ಪೊಲೀಸರು ವಿಚಾರಣೆಗೆ ಕರೆದಾಗ ಇಬ್ಬರು ಹಾಜರಾಗಬೇಕು ಎಂದು ಹೇಳಿ ಜಾಮೀನು ಮಂಜೂರು ಮಾಡಿದೆ.