ಬೆಂಗಳೂರು, ಮೇ 04 (DaijiworldNews/MS): ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಆಗಿರುವ ಅಕ್ರಮವನ್ನು ಪೊಲೀಸರೇ ಬಯಲಿಗೆಳೆದಿದ್ದು, ಇದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಆದ ಅವಮಾನಕ್ಕೆ ಪ್ರತಿಕಾರ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಒಂದು ವೇಳೆ ಬೆಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಬಿಜೆಪಿ ನಾಯಕರು ಮಾತನಾಡದೇ ಇದ್ದರೆ ಈ ಆರೋಪ ಹೊರಗೆ ಬೀಳುತ್ತಲೇ ಇರಲಿಲ್ಲ. ಬಿಜೆಪಿ ನಾಯಕನ ಮಾತುಗಳಿಂದ ಕೆರಳಿದ ಪೊಲೀಸ್ ಸಿಬ್ಬಂದಿಗೇ ಈ ಅಕ್ರಮವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಚಂದ್ರು ಹತ್ಯೆ ಪ್ರಕರಣಕ್ಕೂ ಪಿಎಸ್ಐ ಅಕ್ರಮ ಬಯಲಿಗೆ ಬರುವುದಕ್ಕೂ ನಂಟಿದೆ.
ಪೊಲೀಸ್ ಇಲಾಖೆ ಇದನ್ನು ಅಪಘಾತ ಎಂದು ಹೇಳಿತ್ತು. ಆದರೆ, ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಆದ ಗಲಾಟೆ ಎಂದು ಕಥೆ ಕಟ್ಟಿದ್ದರು. ಕಮಲ್ ಪಂಥ್ ಅವರ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪ ಚುಕ್ಕೆ ಇಲ್ಲ , ಆದರೆ ಬಿಜೆಪಿಯ ಒಬ್ಬ ವಕ್ತಾರ ಕಮಲ್ ಪಂಥ್ ವಿರುದ್ಧ ಆರೋಪ ಮಾಡಿದ್ದರು. ಅದೇ ವಕ್ತಾರರಿಗೆ ಕಲಬುರ್ಗಿಯಲ್ಲಿ ಬಂಧನ ಆದವರ ಲಿಂಕ್ ಇತ್ತು. ಹೀಗಾಗಿ ನಿಷ್ಠಾವಂತ ಅಧಿಕಾರಿಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು, ಸರ್ಕಾರಕ್ಕೆ ಬುದ್ಧಿ ಕಲಿಸಲು ಅವರ ಅಭಿಮಾನಿಗಳೇ ಇದನ್ನು ಬಯಲಿಗೆ ಎಳೆದರು ಎಂದು ಆರೋಪಿಸಿದ್ದಾರೆ.
ಶೇ 30ರಷ್ಟು ಮಂದಿ ಅಕ್ರಮದಲ್ಲಿ ಭಾಗಿ ಆಗಿರಬಹುದು. ಆದರೆ ಇನ್ನುಳಿದವರು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಹೇಳಿದ್ದಾರೆ.