ಬೆಂಗಳೂರು, ಮೇ 04 (DaijiworldNews/MS): ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಆಯೋಜಿಸಿದ್ದ ಭೋಜನ ಕೂಟದಲ್ಲಿ ನಾಯಕರು ಬೆಳ್ಳಿತಟ್ಟೆಯಲ್ಲಿ ಊಟ ಮಾಡಿದ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿ ಸರ್ಕಾರಿ ನೇಮಕಾತಿಯಲ್ಲಿ, ಪ್ರತಿ ಸರ್ಕಾರಿ ವರ್ಗಾವಣೆಯಲ್ಲಿ, ಪ್ರತಿ ಸರ್ಕಾರಿ ಗುತ್ತಿಗೆಯಲ್ಲಿ 40% ಕಮಿಷನ್ ಪಡೆದು, ಇಡೀ ರಾಜ್ಯವನ್ನ ಲೂಟಿ ಮಾಡಿ, ರಾಜ್ಯದ ಸಂಪನ್ಮೂಲಗಳನ್ನ ಗುಡುಸಿ ಗುಂಡಾಂತರ ಮಾಡಿದ ಆದಾಯದಲ್ಲಿ ಬೆಳ್ಳಿ ತಟ್ಟೆಯಲ್ಲಿ ಭೋಜನ ಸವೆಯುವವರಿಗೆ, ಭಾರತ ಹಸಿವು ಸೂಚಂಕ್ಯದಲ್ಲಿ 117ನೇ ಸ್ಥಾನಕ್ಕೆ ಕುಸಿದಿರೋದು ಕಾಣೋದು ಹೇಗೆ?" ಎಂದು ಕೆಪಿಸಿಸಿ ಪ್ರಶ್ನಿಸಿದೆ.
ಕೇಂದ್ರ ಗೃಹಸಚಿವರ ರಾಜ್ಯದ ಭೇಟಿ ಕೆಟ್ಟು ನಿಂತ ಡಬಲ್ ಇಂಜಿನ್ ಸರ್ಕಾರವನ್ನು ತಳ್ಳಿ ಸ್ಟಾರ್ಟ್ ಮಾಡುವುದಕ್ಕಲ್ಲ, ಬದಲಾಗಿ ಜೆ. ಪಿ. ನಡ್ಡಾ ಅವರನ್ನು ಸೈಡ್ ಲೈನ್ ಮಾಡುವುದಕ್ಕೆ! ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ಆಗುಹೋಗುಗಳನ್ನು ಚರ್ಚಿಸುವ ಬದಲು ಪಕ್ಷದ ಸಭೆ ಮಾಡುತ್ತಿದ್ದಾರೆ. ಅವರ ಭೇಟಿಯಿಂದ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲ" ಎಂದು ಕುಹಕವಾಡಿದೆ,
"ಅಮಿತ್ ಶಾ ಅವರೇ, ಪ್ರಧಾನಿ ಕಚೇರಿಗೆ ಗುತ್ತಿಗೆದಾರರು ಬರೆದ ಪತ್ರ ತಲುಪಿದವೇ? ನಿಮ್ಮ ಬಿಜೆಪಿ ಸರ್ಕಾರ 40% ಕಮಿಶನ್ ಹಗರಣದಲ್ಲಿ ಮಿಂದೇಳುತ್ತಿದೆ, ಈ ಬಗ್ಗೆ ತನಿಖೆ ಮಾಡುವುದಿಲ್ಲವೇ?. ನಿಮ್ಮ ಈಶ್ವರಪ್ಪನವರು ಒಂದು ಜೀವ ಬಲಿ ಪಡೆದಿದ್ದಾರೆ, ಅವರ ಬಂಧನ ಆಗದಿರುವುದೇಕೆ ಎಂದು ಉತ್ತರಿಸುವಿರಾ? ಅಥವಾ 40% ನಲ್ಲಿ ಪಾಲು ಪಡೆಯಲು ಬಂದಿರುವಿರಾ?' ಎಂದು ಲೇವಡಿ ಮಾಡಿದೆ.