ಸಾಂಗ್ಲಿ, ಮೇ 03 (DaijiworldNews/DB): ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ 2008ರಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ.
14 ವರ್ಷಗಳ ಹಿಂದೆ 2008ರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ ಠಾಕ್ರೆ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 109 ಹಾಗೂ 117 (ಅಪರಾಧ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಾಂಗ್ಲಿಯ ಮ್ಯಾಜಿಸ್ಟ್ರೇಟರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.
ರಾಜ್ ಠಾಕ್ರೆ ಹಾಗೂ ಎಂಎನ್ಎಸ್ ನಾಯಕ ಶಿರೀಶ್ ಪರಾಕರ್ ಅವರನ್ನು ಬಂಧಿಸಿ ಜೂನ್ 8ರ ಒಳಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮುಂಬೈ ಪೊಲೀಸ್ ಆಯುಕ್ತರು ಹಾಗೂ ಖೆರ್ವಾಡಿ ಪೊಲೀಸ್ ಠಾಣೆಗೆ ಸೂಚಿಸಲಾಗಿದೆ ಎಂದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜ್ಯೋತಿ ಪಾಟೀಲ್ ತಿಳಿಸಿರುವುದಾಗಿ ವರದಿಯಾಗಿದೆ.
ಮಸೀದಿಗಳ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕೆಂದು ರಾಜ್ ಠಾಕ್ರೆ ಇತ್ತೀಚೆಗೆ ಆಗ್ರಹ ಮಾಡುತ್ತಿದ್ದು, ಇದರ ಬೆನ್ನಲ್ಲೇ, ಪ್ರಚೋದನಾಕಾರಿ ಭಾಷಣ ವಿಚಾರ ಸಂಬಂಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.