ಲಖನೌ, ಮೇ 03 (DaijiworldNews/DB): ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ದ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ನಾನವನನ್ನು ಬೆಳೆಸಲು ನೋಡಿದೆ, ಆತ ನನ್ನನ್ನು ತುಳಿಯುತ್ತಿದ್ದಾನೆ ಎಂದು ಅಖಿಲೇಶ್ ಹೆಸರು ಹೇಳದೆಯೇ ಶಿವಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟರ್ನಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿರುವ ಶಿವಪಾಲ್, ನನ್ನ ಆತ್ಮ ಗೌರವವನ್ನು ಬದಿಗಿಟ್ಟು ಆತನನ್ನು ನಾನು ಖುಷಿಯಿಂದಿರುವಂತೆ ಮಾಡಿದೆ. ಆ ಮೂಲಕ ಅತ್ಯಂತ ಕೆಳಮಟ್ಟಕ್ಕೆ ಇಳಿದೆ. ಆದರೆ ಆತ ನನ್ನನ್ನು ಸಾಕಷ್ಟು ನೋಯಿಸಿದ್ದಾನೆ. ನಾನು ಆತನಿಗೆ ನಡೆಯಲು ಕಲಿಸಿದೆ. ಆತನನ್ನು ಬೆಳೆಸಿದೆ. ಆದರೆ ಆತ ನನ್ನನ್ನು ತುಳಿಯುತ್ತಲೇ ಇದ್ದೇನೆ. ಇನ್ನೂ ಆತನ ಮೇಲೆ ನನಗೆ ಕೋಪ ಇದೆ ಎಂದಾದರೆ ಆತ ನನ್ನನ್ನು ಅದೆಷ್ಟು ನೋಯಿಸಿರಬಹುದು ಎಂಬುದು ನಿಮಗೂ ಅರ್ಥವಾಗಬಹುದು ಎಂದು ಬರೆದುಕೊಂಡಿದ್ದಾರೆ.
ಶಿವಪಾಲ್ ಟ್ವೀಟ್ ಸಂಬಂಧಿಸಿ ಸಮಾಜವಾದಿ ಪಕ್ಷದ ಹಿರಿಯ ಶಾಸಕರೊಬ್ಬರು ಪ್ರತಿಕ್ರಿಯಿಸಿ, ಈಗಾಗಲೇ ಪಕ್ಷದ ಮುಸ್ಲಿಂ ಮುಖಂಡರು ಅಖಿಲೇಶ್ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಇದೀಗ ಶಿವಪಾಲ್ ಕೂಡಾ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷಕ್ಕೆ ಮುಂದೆ ಕೆಟ್ಟ ದಿನಗಳು ಎದುರಾಗಲಿವೆ ಎಂಬುದರ ಸಂಕೇತ ಇದಾಗಿದೆ ಎಂದು ತಿಳಿಸಿದ್ದಾರೆ.
ಶಿವಪಾಲ್ ಯಾದವ್ ಅವರ ಅಣ್ಣನ ಮಗ ಅಖಿಲೇಶ್ ಯಾದವ್. ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಪಾಲ್ ಯಾದವ್ ಮತ್ತು ಅಖಿಲೇಶ್ ಯಾದವ್ ಒಂದಾಗಿದ್ದರು. ಆದರೆ ಇದೀಗ ಅಸಮಾಧಾನ ಭುಗಿಲೆದ್ದಿದೆ.