ತಿರುವನಂತಪುರಂ, ಮೇ 03 (DaijiworldNews/DB): ಕೇರಳ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಅವರ ಮೇಲಿದ್ದ ಸೋಲಾರ್ ಲೈಂಗಿಕ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಸಿಬಿಐ ಅಧಿಕಾರಿಗಳು ಕೇರಳ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕ್ಲಿಫ್ ಹೌಸ್ಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಂದು ತಂಡ ಬೆಳಗ್ಗೆ 9.30ರ ವೇಳೆಗೆ, ಮತ್ತೊಂದು ತಂಡ ಮಹಿಳಾ ದೂರುದಾರರೊಂದಿಗೆ 10 ಗಂಟೆ ವೇಳೆಗೆ ಆಗಮಿಸಿ ತಪಾಸಣೆ ನಡೆಸಿದರು. ಇನ್ಸ್ಪೆಕ್ಟರ್ ನಿಬುಲ್ ಶಂಕರ್ ನೇತೃತ್ವದಲ್ಲಿ ತಂಡಗಳೆರಡು ಮನೆಯನ್ನು ಪರಿಶೀಲಿಸಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಆಡಳಿತ ಇಲಾಖೆಯು ಸಾಕ್ಷ್ಯ ಸಂಗ್ರಹಕ್ಕೆ ಅನುಮತಿ ನೀಡಿತ್ತು. ಕ್ಲಿಫ್ ಹೌಸ್ನಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯವನ್ನು ಇದೇ ಮೊದಲ ಬಾರಿಗೆ ಮಾಡಲಾಗಿದೆ.
ಏನಿದು ಪ್ರಕರಣ?
ಉಮನ್ ಚಾಂಡಿ ಅವರು ಮುಖ್ಯಮಂತ್ರಿಯಾಗಿದ್ದಾಗ 2012ರ ಸೆಪ್ಟೆಂಬರ್ 19ರಂದು ಸೋಲಾರ್ ಯೋಜನೆಗೆ ಸಂಬಂಧಿಸಿದ ಚರ್ಚೆಗಾಗಿ ಮಹಿಳೆಗೆ ಕ್ಲಿಫ್ ಹೌಸ್ಗೆ ಬರುವಂತೆ ಹೇಳಿದ್ದರು. ಈಕೆ ಕುಖ್ಯಾತ ಸೋಲಾರ್ ಹಗರಣದಲ್ಲಿ ಕಿಂಗ್ಪಿನ್ ಆಗಿದ್ದಳು. ಚರ್ಚೆಗೆ ಸಿಎಂ ಕರೆದಲ್ಲಿಗೆ ತೆರಳಿದ್ದಾಗ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತೆಂದು ಕಳೆದ ವರ್ಷ ಆರು ಮಂದಿಯ ಮೇಲೆ ಆಕೆ ದೂರು ದಾಖಲಿಸಿದ್ದಳು. ಅದರಂತೆ ಆಗ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹೈಬಿ, ಸಂಸದ ಅಡೂರ್ ಪ್ರಕಾಶ್, ಶಾಸಕ ಎ.ಪಿ. ಅನಿಲ್ ಕುಮಾರ್, ಮಾಜಿ ಕಾಂಗ್ರೆಸ್ ನಾಯಕ ಮತ್ತು ಹಾಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಅವರ ಮೇಲೆ ಅತ್ಯಾಚಾರ ದೂರು ದಾಖಲಾಗಿತ್ತು. ರಾಜ್ಯ ಅಪರಾಧ ವಿಭಾಗವು ಮೊದಲು ತನಿಖೆ ನಡೆಸಿ ಬಳಿಕ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.
ಅಲ್ಲದೆ 2012ರಲ್ಲಿ ಶಾಸಕರ ಹಾಸ್ಟೆಲ್ನಲ್ಲಿರುವ ತನ್ನ ಕೊಠಡಿಯಲ್ಲಿ ಯುವ ಕಾಂಗ್ರೆಸ್ ನಾಯಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಎಂದೂ ಆಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ತಿರುವನಂತಪುರಂನಲ್ಲಿರುವ ಶಾಸಕರ ಹಾಸ್ಟೆಲ್ನಲ್ಲಿ ತಪಾಸಣೆ ನಡೆಸಲಾಗಿತ್ತು.
ನ್ಯಾಯಮೂರ್ತಿ ಜಿ. ಶಿವರಾಜನ್ ಆಯೋಗ ಕೂಡಾ ಈ ಸಂಬಂಧ ಈ ಹಿಂದೆ ತನಿಖೆಗೆ ಶಿಫಾರಸ್ಸು ಮಾಡಿದ್ದರು.