ತಿರುವನಂತಪುರ, ಮೇ 03(DaijiworldNews/MS): ಕಾಸರಗೋಡಿನ ಫುಡ್ ಫಾಯಿಂಟ್ ಕೂಲ್ ಬಾರ್ ನಿಂದ ಷಾವರ್ಮಾ ಸೇವಿಸಿದ ವಿದ್ಯಾರ್ಥಿನಿ ಮೃತಪಟ್ಟ,ಸುಮಾರು 46 ಮಂದಿ ಅಸ್ವಸ್ಥಗೊಂಡ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತಾ ಇಲಾಖೆಯಡಿ ರಾಜ್ಯಾದ್ಯಂತ ಆಹಾರ ಸುರಕ್ಷತೆಯ ಬಗ್ಗೆ ತಪಾಸಣೆಯನ್ನು ಬಲಪಡಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೊಳೆತ ಅಥವಾ ಅರೆಬೇಯಿಸಿದ ಮಾಂಸದ ಬಳಕೆ, ಅಜಾಗರೂಕತೆಯಿಂದ ಮಯೋನೈಸ್ ತಯಾರಿಕೆ ಹಾಗೂ ಕೊಳಕು ವಾತಾವರಣದಲ್ಲಿ ನಿರ್ಮಿಸಲಾಗುತ್ತಿರುವ ಷಾವರ್ಮಾದಿಂದ ಆಹಾರವೂ ವಿಷಕ್ಕೆ ಕಾರಣವಾಗುತ್ತಿದೆ . ಆದ್ದರಿಂದ, ಆಹಾರ ವಿಷದಿಂದ ಇದೇ ರೀತಿಯ ದುರ್ಘಟನೆಗಳನ್ನು ತಪ್ಪಿಸಲು, ತಿನಿಸುಗಳ ನಿಯಮಿತ ತಪಾಸಣೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಷಾವರ್ಮಾವನ್ನು ಬೇಯಿಸಲು ವಿಶೇಷ ಮಾನದಂಡವನ್ನು ಪರಿಚಯಿಸಲಾಗುತ್ತದೆ ಎಂದು ಸಚಿವೆ ತಿಳಿಸಿದ್ದಾರೆ.
ಆಹಾರ ಮತ್ತು ಸುರಕ್ಷತಾ ಇಲಾಖೆಯ ಪರವಾನಗಿ ಇಲ್ಲದೆ ರಾಜ್ಯದಲ್ಲಿ ಹಲವಾರು ರೆಸ್ಟೋರೆಂಟ್ಗಳು ನಡೆಯುತ್ತಿವೆ. ಜಿಲ್ಲಾ ಮಟ್ಟದ ತಪಾಸಣೆಯ ನಂತರ ಅಂತಹ ಅಂಗಡಿಗಳನ್ನು ಸೀಲ್ ಮಾಡಲಾಗುವುದು. ನಿಯಮ ಉಲ್ಲಂಘಿಸಿ ನಡೆಸುತ್ತಿರುವ ತಿನಿಸುಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
4888 ಕಿಲೋಗ್ರಾಂಗಳಷ್ಟು ಕೊಳೆತ ಮೀನುಗಳನ್ನು ಆಪರೇಷನ್ ಮಲ್ಸ್ಯ ಮೂಲಕ ವಶಪಡಿಸಿಕೊಳ್ಳಲಾಗಿದೆ. ಮಾದರಿಗಳನ್ನು ವಿಶ್ಲೇಷಣೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಮತ್ತು ಅದರಲ್ಲಿ ರಾಸಾಯನಿಕಗಳು ಸೇರಿಕೊಂಡಿರುವುದು ಕಂಡುಬಂದಿದೆ. ಆಹಾರ ಮತ್ತು ಸುರಕ್ಷತಾ ಅಧಿಕಾರಿಗಳ ತಪಾಸಣೆಯ ನಂತರ ಸಂಗ್ರಹಿಸಿದ ಆಹಾರ ಮಾದರಿಗಳನ್ನು ಪರೀಕ್ಷಿಸಲು ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ಸಂಚಾರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ
ಅಲ್ಲದೆ ಸಾರ್ವಜನಿಕರು ಕೂಡ ಇಂತಹ ಲ್ಯಾಬ್ಗಳ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.